ಹಾಸನ: ಜಿಲ್ಲೆಯಲ್ಲಿ ನವವಿವಾಹಿತೆ ನಿಗೂಢವಾಗಿ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಾವತಿ ನಾಲೆಯಲ್ಲಿ ಸತತ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನ ಕುರುವಂಕ ಗ್ರಾಮದ ನವವಿವಾಹಿತೆ ಪ್ರಿಯಾಂಕಾ (24) ಕಣ್ಮರೆಯಾಗಿದ್ದಾರೆ. ಸೆ.19ರ ರಾತ್ರಿ ಸುಮಾರು 9 ಗಂಟೆಗೆ ಪ್ರಿಯಾಂಕಾ ಕಾಲುವೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಚಿಕ್ಕನಾಯಕನಹಳ್ಳಿ ಬಳಿಯ ಹೇಮಾವತಿ ನಾಲೆಯಲ್ಲಿ ಕಳೆದ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ
ನವವಿವಾಹಿತೆಯ ಕುಟುಂಬಸ್ಥರ ಆರೋಪ:
ಪ್ರಿಯಾಂಕಾಳನ್ನು ಆಕೆಯ ಪತಿ ರಾಜಶೇಖರ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜಶೇಖರ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿ, ಹತ್ಯೆ ಮಾಡಿದ್ದಾರೆ ಎಂದಿದ್ದಾರೆ.
ಇತ್ತ ರಾಜಶೇಖರ ಕುಟುಂಬಸ್ಥರು ಪ್ರಿಯಾಂಕಾ ಪೋಷಕರ ಆರೋಪವನ್ನು ಅಲ್ಲಗಳೆದಿದ್ದಾರೆ. ಆಕೆಗೆ ಈ ಮೊದಲೇ ಒಬ್ಬ ಬಾಯ್‌ಫ್ರೆಂಡ್ ಇದ್ದ. ಆತನ ಜೊತೆಗೆ ಆಕೆಗೆ ಮದುವೆಯಾಗಿತ್ತು. ಈ ಎಲ್ಲಾ ವಿಚಾರ ಮುಚ್ಚಿಟ್ಟು ಆಕೆಯನ್ನ ನಮ್ಮ ಹುಡುಗನಿಗೆ ಮದುವೆ ಮಾಡಿದ್ದಾರೆ. ಇದೀಗ ಪ್ರಿಯಾಂಕಾ ತಾನೇ ಕಾಲುವೆಗೆ ಹಾರಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಈಜಿ ದಡ ಸೇರಿ ಬೇರೆ ಎಲ್ಲಿಯಾದರೂ ಹೋಗಿದ್ದಾಳೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ

