- ಬಿ.ಪಿ ಹರಿಶ್ ಅಧಿಕಾರ ದೇಶವ್ಯಾಪಿ ಇದೆ ಎಂದು ವ್ಯಂಗ್ಯ
ದಾವಣಗೆರೆ: ಸ್ವಪಕ್ಷದ ಶಾಸಕ ಬಿ.ಪಿ ಹರೀಶ್ (B.P Harish) ವಿರುದ್ಧ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ದಾವಣಗೆರೆ (Davanagere) ಜಿಲ್ಲಾ ಬಿಜೆಪಿಯಲ್ಲಿ (BJP) ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪಕ್ಷ ನಿಷ್ಠೆ, ಜನಪರ ಕಾಳಜಿ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಹರೀಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅವರು, ನಮ್ಮ ವಿಚಾರಕ್ಕೆ ಬಂದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇದೇ ವೇಳೆ ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ – ನೂತನ ಜಿಲ್ಲಾಧ್ಯಕ್ಷನ ಬದಲಾವಣೆಗೆ ಪಟ್ಟು
ʻಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ನನ್ನ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು. ಯಾರು ಅದನ್ನು ಖಂಡಿಸಿದ್ದಾರೋ ಅವರೆಲ್ಲ ಬಿಜೆಪಿಯವರು, ಯಾರು ಸಮರ್ಥನೆ ಮಾಡಿಕೊಂಡು ಹಾಗೂ ಮೌನವಹಿಸಿದ್ದಾರೋ ಅವರೆಲ್ಲ ಕಾಂಗ್ರೆಸ್‌ನವರುʼ ಎಂದು ಶಾಸಕ ಬಿಪಿ ಹರೀಶ್ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಅವರು, ಶಾಸಕ ಬಿ.ಪಿ ಹರೀಶ್ ದೊಡ್ಡವರು, ಅವರು ಏಕೈಕ ಶಾಸಕ. ಅವರ ವ್ಯಾಪ್ತಿ ಕೇವಲ ಹರಿಹರಕ್ಕೆ ಸೀಮಿತವಾಗಿಲ್ಲ, ಬದಲಾಗಿ ದೇಶವ್ಯಾಪಿ ಇದೆ. ಪ್ರಧಾನಿ ಮೋದಿ ಅವರ ಬಗ್ಗೆ ಟೀಕೆ ಮಾಡುವ ಮತ್ತು ದೆಹಲಿಗೆ ತೆರಳಿ ಪಕ್ಷದಲ್ಲಿ ಭಿನ್ನಮತ ಸೃಷ್ಟಿಸುವ ಏಕೈಕ ಶಾಸಕ ಹರೀಶ್ ಎಂದು ವ್ಯಂಗ್ಯವಾಡಿದ್ದಾರೆ.

ನೀವು ಸೋತಾಗ ನಿಮ್ಮ ಬೆಂಬಲಕ್ಕೆ ನಿಂತಿದ್ದವರು ನಾವು. 2014ರಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ ಪಾಲಾಗಿದ್ದ ನೀವು, ಇದೀಗ ಪಕ್ಷ ನಿಷ್ಠೆಯ ಬಗ್ಗೆ ಮಾತನಾಡುತ್ತಿದ್ದೀರಾ? ನಂತರ ಹಿರಿಯ ನಾಯಕರಾದ ರವೀಂದ್ರನಾಥ್ ಅವರ ನೇತೃತ್ವದಲ್ಲಿ ನಿಮ್ಮನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡೆವು. ನನ್ನದೇ ಕಾರಿನಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ನಿಮ್ಮ ಕೆಲಸಗಳನ್ನು ಮಾಡಿಕೊಟ್ಟಿದ್ದೆ. ಅದನ್ನೆಲ್ಲಾ ಈಗಲೇ ಮರೆತುಬಿಟ್ಟಿರಾ. ಈಗ ಅಹಂಕಾರ, ದುರಹಂಕಾರದಿಂದ ಮಾತನಾಡುತ್ತಿದ್ದೀರಿ. ನಿಮ್ಮನ್ನು ಸ್ವಂತ ಸಹೋದರನಂತೆ ನೋಡಿಕೊಂಡಿದ್ದೆವು ಎಂದು ಹಳೆಯ ದಿನಗಳನ್ನು ನೆನಪಿಸಿದರು.
ಅಟ್ರಾಸಿಟಿ ಕೇಸ್ ಹಾಕಿಸಿಕೊಂಡಿದ್ದು, ಎಸ್ಪಿ ಉಮಾ ಪ್ರಶಾಂತ್ ಅವರ ವಿರುದ್ಧದ ಪ್ರಕರಣ, ಮಣ್ಣು ಸಾಗಾಟ ವಿಚಾರ ಹಾಗೂ ಮೊಟ್ಟೆ ಹೊಡೆಸಿಕೊಂಡು ಈ ಎಲ್ಲಾ ಪ್ರಕರಣಗಳು ಪಕ್ಷಕ್ಕೆ ತೀವ್ರ ಮುಜುಗರ ಆಗುವಂತೆ ಮಾಡಿದ್ದು ನೀವು. ಇದಕ್ಕೆಲ್ಲಾ ನಾವು ಕಾರಣವೇ ಸಚಿವರ ಬಗ್ಗೆ ನಾವು ಖಂಡನೆ ಮಾಡಿದ್ದೇವೆ. ಆದರೆ, ನೀವು ಕಾಂಗ್ರೆಸ್ ನಾಯಕರೊಂದಿಗೆ ಹೋಗಿ ಒಳ ಒಪ್ಪಂದ ಮಾಡಿಕೊಂಡಿದ್ದೀರಿ. ನಿಮ್ಮ ಪರವಾಗಿ ಬಂದರೆ ಅದು ಬಿಜೆಪಿ, ಇಲ್ಲದಿದ್ದರೆ ಅದು ಬಿಜೆಪಿಯೇ ಅಲ್ವಾ ಎಂದು ಪ್ರಶ್ನಿಸಿದರು.
ಯಾವ ಹೋರಾಟಕ್ಕೆ ನೀವು ಧ್ವನಿಯಾಗಿದ್ದೀರಿ ಹರೀಶಣ್ಣ? ಭದ್ರಾ ನಾಲೆಯ ನೀರಿನ ವಿಚಾರದಲ್ಲಿ ಅಥವಾ ನೀರು ಸೋರಿಕೆಯಾದಾಗ ನೀವು ಎಲ್ಲಿ ಹೋಗಿದ್ರಿ? ಎಲ್ಲಿ ಧ್ವನಿ ಎತ್ತಿದ್ದೀರಿ? ನಾಟಕೀಯವಾಗಿ ಬಿಜೆಪಿ ಎಂದರೆ ಹಾಗಲ್ಲ, ಪಕ್ಷ ಕಟ್ಟುವ ಕೆಲಸ ಮಾಡಬೇಕು. ಭದ್ರಾ ನೀರಿನ ವಿಚಾರದಲ್ಲಿ ನಾನು ಹೋರಾಟ ಮಾಡಿಲ್ಲ ಎಂದು ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಇಲ್ಲವಾದರೆ ನೀವು ರಾಜೀನಾಮೆ ನೀಡುತ್ತೀರಾ?” ಎಂದು ಬಹಿರಂಗ ಸವಾಲು ಹಾಕಿದರು.
ಗೆದ್ದು ಬಿಟ್ಟಿದ್ದೀನಿ ಎಂದು ಬೀಗುವುದು ಬೇಡ ಹರೀಶಣ್ಣ. ಜಿಲ್ಲೆಯ ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷದ ಬಗ್ಗೆ ಮಾತನಾಡಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುತ್ತಿದ್ದೆವು. ಇದು ನಿಮ್ಮ ವೈಯಕ್ತಿಕ ಸಮಸ್ಯೆ, ನಿಮ್ಮ ಟೀಕೆ, ಟಿಪ್ಪಣಿಗಳಿಗೆ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು. ನೀವು ಮುಂದೆ ಬಿಜೆಪಿಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ನಾವೆಲ್ಲಾ ಸದಾ ಬಿಜೆಪಿಯವರೇ. ದಾವಣಗೆರೆಗೆ ಬರಲು ನೀವು ಏನೇನು ಮಾಡುತ್ತಿದ್ದೀರಾ ಎಂಬುದು ನನಗೆ ಗೊತ್ತಿದೆ. ಉಂಡ ಮನೆಯ ಜಂತಿ ಎಣಿಸುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದಾವಣಗೆರೆ | ಗಣೇಶ ಮೂರ್ತಿ ಹೊತ್ತಿದ್ದ ಟ್ರ್ಯಾಕ್ಟರ್ ಚಲಾಯಿಸಿದ ಡಿಸಿ

