– ಕರ್ನಾಟಕ ಸಂಗೀತ ಗಾಯಕ ಟಿ.ಎಂ.ಕೃಷ್ಣ ಅವರಿಂದ ಅರ್ಜಿ
ನವದೆಹಲಿ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ನ (Vande Mataram) ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ದೇಶನ ಹಾಗೂ ಅದಕ್ಕೆ ಸಂಬಂಧಿಸಿದ ದಂಡಾತ್ಮಕ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಡೆಸಿತು. ಅರ್ಜಿಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ.ಮೊಹನಾ ಅವರನ್ನೊಳಗೊಂಡ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿತು. ಕರ್ನಾಟಕ ಮೂಲದ ಖ್ಯಾತ ಕರ್ನಾಟಕ ಸಂಗೀತ ಗಾಯಕ ಟಿ.ಎಂ.ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದು, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವಂತೆ ಮಾಡಿರುವ ನಿಯಮ ಹಾಗೂ ಹಾಡದಿದ್ದರೆ ದಂಡಾತ್ಮಕ ಕ್ರಮ ಕೈಗೊಳ್ಳುವ ಅವಕಾಶವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ‘ವಂದೇ ಮಾತರಂ’ 2 ಚರಣ ಹಾಡುವ ರಾಜ್ಯ ಸರ್ಕಾರ ಆದೇಶ ಪ್ರಶ್ನಿಸಿ ಅರ್ಜಿ; ವಿಚಾರಣೆ 3 ವಾರ ಮುಂದೂಡಿಕೆ
ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಮುರಳೀಧರ್, ದಂಡಾತ್ಮಕ ಕಾನೂನಿನಲ್ಲಿ ಅಪರಾಧಕ್ಕೆ ಕಾರಣವಾಗುವ ನಡವಳಿಕೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಅಸ್ಪಷ್ಟ ನಿಯಮಗಳ ಆಧಾರದ ಮೇಲೆ ನಾಗರಿಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅವಕಾಶ ಇರಬಾರದು ಎಂದು ವಾದಿಸಿದರು.
ವಿಚಾರಣೆ ವೇಳೆ ‘ವಂದೇ ಮಾತರಂ’ನ ಎರಡು ಅಥವಾ ಆರು ಚರಣಗಳ ಪೈಕಿ ಯಾವುದನ್ನು ಅಧಿಕೃತವಾಗಿ ಹಾಡಬೇಕು ಎಂಬ ಪ್ರಶ್ನೆಯನ್ನು ಈ ಹಂತದಲ್ಲಿ ನಿರ್ಧರಿಸಲು ಸುಪ್ರೀಂ ಕೋರ್ಟ್ ಮುಂದಾಗಲಿಲ್ಲ. ರಾಷ್ಟ್ರೀಯ ಸಂಕೇತಗಳಿಗೆ ಸಂಬಂಧಿಸಿದ ನೀತಿ ಮತ್ತು ಅದರ ರೂಪವನ್ನು ನಿರ್ಧರಿಸುವುದು ಸರ್ಕಾರದ ವ್ಯಾಪ್ತಿಯಲ್ಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದರೆ, ಹಾಡಲು ನಿರಾಕರಿಸುವ ನಾಗರಿಕರ ವಿರುದ್ಧ ಕ್ರಿಮಿನಲ್ ದಂಡನೆ ವಿಧಿಸಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಸಂದರ್ಭದಲ್ಲಿ 1986ರ ಬಿಜೋಯ್ ಎಮ್ಯಾನುಯೆಲ್ ಪ್ರಕರಣದ ತೀರ್ಪನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಧಾರ್ಮಿಕ ಅಥವಾ ಆತ್ಮಸಾಕ್ಷಿಯ ಕಾರಣದಿಂದ ರಾಷ್ಟ್ರೀಯ ಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಕೇವಲ ಹಾಡದ ಕಾರಣಕ್ಕೆ ದಂಡಾತ್ಮಕ ಕ್ರಮ ಕೈಗೊಳ್ಳುವ ಪ್ರಶ್ನೆ ಈ ಹಿಂದೆಯೇ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿತ್ತು. ಇದೇ ಕಾನೂನು ತತ್ವ ಪ್ರಸ್ತುತ ಪ್ರಕರಣಕ್ಕೂ ಅನ್ವಯಿಸಬಹುದೇ ಎಂಬುದು ವಿಚಾರಣೆಯ ಪ್ರಮುಖ ಅಂಶವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರನ್ನ ರಣಹದ್ದು ಎಂದ ಸಚಿವ ಯತೀಂದ್ರ ವಿರುದ್ಧ ದೂರು
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ವಿಚಾರಣೆ ವೇಳೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಹಿರಿಯ ವಕೀಲ ಎಸ್.ಮುರಳೀಧರ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾಗ್ವಾದವೂ ನಡೆಯಿತು. ನೋಟಿಸ್ ನೀಡದಂತೆ ಕೋರ್ಟ್‌ಗೆ ಅವರು ಮನವಿ ಮಾಡಿದರು. ಅದಾಗ್ಯೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿತು.

