– ನಿಮ್ಮ ಹೆಸರಿನ ಸಿಮ್ ಕಾರ್ಡ್ ಬೇರೆ ಯಾರಾದ್ರೂ ಬಳಸುತ್ತಿದ್ದಾರಾ?
ನವದೆಹಲಿ: ನಿಮ್ಮ ಹೆಸರಿನಲ್ಲಿ ಪಡೆದಿರುವ ಸಿಮ್ ಕಾರ್ಡ್ (SIM Card) ಅನ್ನು ಬೇರೆಯವರಿಗೆ ಬಳಸಲು ನೀಡಿದ್ದೀರಾ? ಹಾಗಿದ್ದರೆ ಎಚ್ಚರ. ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡನ್ನ ಬೇರೆಯವರು ಬಳಸಲು ಅವಕಾಶ ನೀಡದಂತೆ ದೂರಸಂಪರ್ಕ ಇಲಾಖೆ (DoT) ಎಚ್ಚರಿಕೆ ನೀಡಿದೆ.
ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ SIM ಕಾರ್ಡ್ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ, ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಗಳಲ್ಲಿ ಬದಲಾವಣೆ (ಟ್ಯಾಂಪರಿಂಗ್) ಮಾಡಿದ್ರೆ ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಇಲಾಖೆ ಎಚ್ಚರಿಸಿದೆ.
ಈ ರೀತಿ ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ಮಾಡುವವರಿಗೆ ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸೆ.21 ರಂದು ಹೊರಡಿಸಿದ ಆದೇಶದಲ್ಲಿ ದೂರ ಸಂಪರ್ಕ ಇಲಾಖೆ ತಿಳಿಸಿದೆ.

ಅದರಲ್ಲೂ ತಮ್ಮ ಗುರುತಿನ ದಾಖಲೆಗಳನ್ನು ಬಳಸಿ ತಮ್ಮ ಗಮನಕ್ಕೆ ಬಾರದಂತೆ ಯಾರಾದರೂ ಮೊಬೈಲ್ ಸಂಪರ್ಕ ಪಡೆದಿರುವ ಸಾಧ್ಯತೆ ಇರುವುದರಿಂದ, ಗ್ರಾಹಕರು ತಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಖ್ಯೆಗಳು ನೋಂದಣಿಯಾಗಿವೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವಂತೆ ಇಲಾಖೆ ಸೂಚಿಸಿದೆ.
DoT ಈ ಎಚ್ಚರಿಕೆ ನೀಡಿದ್ದೇಕೆ?
ಇತ್ತೀಚಿನ ಸೈಬರ್ ಅಪರಾಧ ತನಿಖೆಯೊಂದರಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಪ್ರಕರಣ ಬೆಳಕಿಗೆ ಬಂದ ಬಳಿಕ DoT ಈ ಎಚ್ಚರಿಕೆ ನೀಡಿದೆ. ಛತ್ತೀಸ್‌ಗಢದ ‘ಪಾಯಿಂಟ್ ಆಫ್ ಸೇಲ್’ (PoS) ಏಜೆಂಟ್ ಒಬ್ಬರು, ಇತರರಿಗೆ ಗೊತ್ತಿಲ್ಲದೇ, ಅವರ ಅನುಮತಿಯೂ ಇಲ್ಲದೇ, ಅವರ ಗುರುತಿನ ದಾಖಲೆಗಳನ್ನು ಬಳಸಿ 25 ಮೊಬೈಲ್ ಸಂಪರ್ಕಗಳನ್ನ ಸಕ್ರಿಯಗೊಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೇಸ್ ಬೆಳಕಿಗೆ ಬಂದ ಹಿನ್ನೆಲೆ ಡಾಟ್ ಮತ್ತು ಸಂಬಂಧಿತ ಟೆಲಿಕಾಂ ಸೇವಾ ಸಂಸ್ಥೆಗಳು ಆ ಪಾಯಿಂಟ್ ಆಫ್ ಸೇಲ್ ಏಜೆಂಟ್ ಅನ್ನು ಬ್ಲ್ಯಾಕ್‌ಲಿಸ್ಟ್ ಮಾಡಿದ್ದು, ಸಿಮ್ ಕಾರ್ಡ್ ನೀಡುವುದನ್ನ ತಾತ್ಕಾಲಿಕವಾಗಿ ತಡೆದಿವೆ. ಅಷ್ಟೇ ಅಲ್ಲದೇ ಆ 25 ಸಂಪರ್ಕ ಸಂಖ್ಯೆಗಳನ್ನ DoT ನ ‘ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್’ ಮೂಲಕ ಪರಿಶೀಲಿಸಲಾಯಿತು. ಅನುಮಾನಾಸ್ಪದವಾಗಿ ಕಂಡುಬಂದ ಸಂಪರ್ಕ ಸಂಖ್ಯೆಗಳನ್ನ ಮರುಪರಿಶೀಲನೆಗೆ ಕಳುಹಿಸಲಾಯಿತು. ಮರುಪರಿಶೀಲನೆಯಲ್ಲಿ ಅಗತ್ಯ ದೃಢೀಕರಣ ಪಡೆಯದ ಸಂಖ್ಯೆಗಳ ಸಂಖ್ಯೆಗಳನ್ನ ನಂತರ ಸ್ಥಗಿತಗೊಳಿಸಲಾಯಿತು.

ನಿಮ್ಮ ಹೆಸರಿನ ಸಿಎಂ ಯಾರಾದ್ರೂ ಬಳಸುತ್ತಿದ್ದಾರಾ?
ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಿಮ್ ಕಾರ್ಡ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು, ವರ್ಗಾಯಿಸುವುದು ಅಥವಾ ಬಳಸಲು ನೀಡುವುದರ ವಿರುದ್ಧವೂ ಡಾಟ್ ಎಚ್ಚರಿಕೆ ನೀಡಿದೆ. ನಿಮ್ಮ ಹೆಸರಿನಲ್ಲಿ ಪಡೆದ SIM ಕಾರ್ಡ್ ಅನ್ನು ಮತ್ತೊಬ್ಬರು ಸೈಬರ್ ವಂಚನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿದರೆ, ಮೂಲ SIM ಚಂದಾದಾರರ ಮೇಲೂ ಕಾನೂನು ಕ್ರಮ ಬರಬಹುದು. ಹಾಗಾಗಿ ಯಾರೇ ಆದರೂ ತಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡನ್ನ ಬೇರೆಯವರಿಗೆ ಬಳಸಲು ನೀಡುವುದನ್ನ ತಪ್ಪಿಸಬೇಕು ಎಂದು ಸಲಹೆ ನೀಡಿದೆ.
ಮೊಬೈಲ್ ಬಳಕೆದಾರರು ಏನನ್ನ ಅವಾಯ್ಡ್ ಮಾಡಬೇಕು?
* ನಕಲಿ ದಾಖಲೆಗಳನ್ನು ಬಳಸಿ SIM ಕಾರ್ಡ್ ಪಡೆಯುವುದು.
* ವಂಚನೆ, ಮೋಸ ಅಥವಾ ಬೇರೆಯವರಂತೆ ನಟಿಸಿ SIM ಪಡೆಯುವುದು.
* ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ SIM ಅನ್ನು ಬೇರೆಯವರಿಗೆ ಮಾರಾಟ ಮಾಡುವುದು ಅಥವಾ ಹಸ್ತಾಂತರಿಸುವುದು.
* ತಮ್ಮ ಹೆಸರಿನ SIM ಅನ್ನು ಸೈಬರ್ ವಂಚನೆಗೆ ‘ಮ್ಯೂಲ್ SIM’ ಆಗಿ ಬಳಸಲು ನೀಡುವುದು.
* SIM ಬಾಕ್ಸ್, ಮೋಡೆಮ್ ಅಥವಾ ಇತರ ಸಾಧನಗಳಲ್ಲಿ IMEI ಸಂಖ್ಯೆಯನ್ನ ಬದಲಾಯಿಸದಂತೆ ಅಥವಾ ಟ್ಯಾಂಪರ್ ಮಾಡುವುದು.
* ಕರೆ ಮಾಡುವವರ ಗುರುತು (Calling Line Identity) ಸೇರಿದಂತೆ ಇತರ ಟೆಲಿಕಾಂ ಗುರುತುಗಳನ್ನ ಬದಲಾಯಿಸುವ ಆ್ಯಪ್‌ಗಳು, ವೆಬ್‌ಸೈಟ್‌ಗಳು ಅಥವಾ ಸಾಧನಗಳನ್ನ ಬಳಸುವುದು.
ಮಾಡಬೇಕಾಗಿದ್ದೇನು?
* ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪರಿಶೀಲಿಸಿಕೊಳ್ಳಬೇಕು.
* ಮೊಬೈಲ್ ಫೋನ್‌ನ ಪ್ರಾಮಾಣಿಕತೆ ಬಗ್ಗೆ ಅನುಮಾನವಿದ್ದರೆ ಅದರ IMEI ಮತ್ತು ಹ್ಯಾಂಡ್‌ಸೆಟ್ ವಿವರಗಳನ್ನು ಪರಿಶೀಲಿಸುವುದು.

