ಆನೇಕಲ್: ಅಂದು ಎಂದಿನಂತೆ ಪೊಲೀಸರು ಗಸ್ತಿನಲ್ಲಿದ್ರು. ಆಸಾಮಿಯೊಬ್ಬ ಅನುಮಾನಾಸ್ಪದವಾಗಿ ಕೈಯಲ್ಲಿ ಬ್ಯಾಗೊಂದನ್ನು ಹಿಡಿದು ಯಾರಿಗೋ ಕಾಯುತ್ತಿರುವುದು ಕಂಡಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಬ್ಯಾಗ್ ಪರಿಶೀಲನೆ ನಡೆಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.
ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಪಟ್ಟಣದ ಪೊಲೀಸರು ಅಕ್ರಮವಾಗಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಧಂದೆ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಿ, ಐದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಹತ್ತು ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಏಳು ಜನರ ವಿರುದ್ಧ ಕೋಕಾ ಕೇಸ್ (KCOCA Case) ದಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಏರ್ಪೋರ್ಟ್ನಲ್ಲಿ 12.57 ಕೋಟಿ ಮೌಲ್ಯದ 36 ಕೆಜಿ ಮಾದಕ ವಸ್ತು ಸೀಜ್
ಮಧ್ಯಪ್ರದೇಶದ ಜಬ್ಬಲ್ ಪುರ್ ಜಿಲ್ಲೆಯ ಬೇಡ ಘಾಟ್ ಗ್ರಾಮದ ವಾಸಿ ಪ್ರದೀಪ್ ರಮೇಶ್, ಬೆಂಗಳೂರಿನ ಕೆಜೆ ಹಳ್ಳಿ ನಿವಾಸಿ ಕುಳ್ಳ ರಿಜ್ವಾನ್, ಆನೇಕಲ್ ಸಮೀಪದ ಗೆರಟಿಗನಬೆಲೆ ವಾಸಿ ಮನೋಜ್, ವೆಂಕಟರಾಜು, ಶಿವರಾಜ್, ನಂಜಪ್ಪ ಮತ್ತು ಗೋಪಿ ಬಂಧಿತ ಆರೋಪಿಗಳು. ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಜಾಲದ ಕಿಂಗ್ ಪಿನ್ ಎನ್ನಲಾದ ದಾವೂದ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಕಂಟ್ರಿ ಮೇಡ್ ಪಿಸ್ತೂಲ್ಗಳ ಕಿಂಗ್ ಪಿನ್ ದಾವೂದ್ ಬೆಂಗಳೂರು ಸೇರಿದಂತೆ ದೇಶದ ನಾನಾ ಕಡೆ ತನ್ನ ಜಾಲ ಹೊಂದಿದ್ದು, ಅತ್ಯಂತ ವ್ಯವಸ್ಥಿತವಾಗಿ ಪಿಸ್ತೂಲ್ಗಳನ್ನು ಮಾರಾಟ ಮಾಡುತ್ತಿದ್ದ. ಆದ್ರೆ ಈ ಬಾರಿ ಅವನ ಲೆಕ್ಕಚಾರ ಕೈಕೊಟ್ಟಿತ್ತು. ತನ್ನ ಆಪ್ತ ಪ್ರದೀಪ್ ರಮೇಶ್ ಜೊತೆ ಮೂರು ಪಿಸ್ತೂಲ್ ಮತ್ತು ಹತ್ತು ಸಜೀವ ಗುಂಡುಗಳನ್ನು ಟ್ರೈನ್ ಮೂಲಕ ಆನೇಕಲ್ಗೆ ಕಳುಹಿಸಿದ್ದ. ಟ್ರೈನ್ ಇಳಿದು ಸಮೀಪದ ನೀಲಗಿರಿ ತೋಪಿನ ಬಳಿ ಪಿಸ್ತೂಲ್ ಡೆಲಿವರಿ ಮಾಡಲು ಕಾಯುತ್ತಿದ್ದಾಗ ಆನೇಕಲ್ ಪೊಲೀಸರು ಅನುಮಾನದ ಮೇಲೆ ತಪಾಸಣೆ ನಡೆಸಿದಾಗ ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ದಂಧೆ ಬಯಲಾಗಿದೆ.ಇದನ್ನೂ ಓದಿ:ಸೋಪು, ಶಾಂಪೂ, ಟೂತ್ಪೇಸ್ಟ್ಗೂ ಇನ್ಮುಂದೆ ವೆಜ್-ನಾನ್ವೆಜ್ ಗುರುತು ಕಡ್ಡಾಯ
ಆನೇಕಲ್ ತಾಲೂಕಿನಲ್ಲಿ ಕ್ರೈಮ್ ಲೋಕದ ಪಟ್ಟಕ್ಕಾಗಿ ಗುಂಪುಗಳ ನಡುವೆ ಗ್ಯಾಂಗ್ವಾರ್ಗಳು ನಡೆಯುತ್ತಿವೆ. ಒಬ್ಬರ ಮೇಲೆ ಮತ್ತೊಬ್ಬರು ಮಚ್ಚು ಮಸೆಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಆನೇಕಲ್ಗೆ ಕಂಟ್ರಿ ಮೇಡ್ ಪಿಸ್ತೂಲ್ಗಳು ಎಂಟ್ರಿ ಕೊಟ್ಟಿರುವುದು ಆತಂಕ ಮೂಡಿಸಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ಆರೋಪಿ ಪ್ರದೀಪ್ ರಮೇಶ್ನನ್ನು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಬೆಂಗಳೂರಿನ ನಟೋರಿಯಸ್ ರೌಡಿಶೀಟರ್ ಕುಳ್ಳ ರಿಜ್ವಾನ್ ಮತ್ತು ಆನೇಕಲ್ ತಾಲ್ಲೂಕಿನಲ್ಲಿ ತನ್ನದೇ ಆದ ಹವಾ ಸೃಷ್ಟಿಸಿರುವ ಮನೋಜ್@ ಜಾಕಿ & ಗ್ಯಾಂಗ್ ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಅಲರ್ಟ್ ಆದ ಪೊಲೀಸರು ಕುಳ್ಳ ರಿಜ್ವಾನ್ ಮತ್ತು ಮನೋಜ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರ ಬಳಿ ಒಂದೊಂದು ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ಗಳು ಪತ್ತೆಯಾಗಿವೆ ಎನ್ನಲಾಗಿದೆ.
ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಪತ್ತೆ ಪ್ರಕರಣ ಸಂಬಂಧ ಬಂಧನವಾಗಿರುವ ಏಳು ಮಂದಿ ಮೇಲೆ ಕೋಕಾ ಕಾಯ್ದೆ (KCOCA case) ಜಾರಿಗೊಳಿಸಲಾಗಿದೆ. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಗೋಪಾಲ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಮೇಲ್ಕಂಡ ಆರೋಪಿಗಳಿಗೆ ನಿಕಟ ಸಂಪರ್ಕವಿದ್ದ ಹತ್ತಕ್ಕೂ ಅಧಿಕ ಮಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತ್ರ ಮಾಹಿತಿ ಬಿಟ್ಟು ಕೊಡುತ್ತಿಲ್ಲ.ಇದನ್ನೂ ಓದಿ: ಬಿಜೆಪಿ ನಾಯಕರನ್ನ ರಣಹದ್ದು ಎಂದ ಸಚಿವ ಯತೀಂದ್ರ ವಿರುದ್ಧ ದೂರು

