ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಕಥೆಗಾರ ಇಂದ್ರಜಿತ್ ಲಂಕೇಶ್ (Indrajit Lankesh) ಅವರು ಭಾರತೀಯ ಚಿತ್ರರಂಗದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರ್ಣಗೊಳಿಸಿದ್ದಾರೆ. ವಿಭಿನ್ನ ಕಥಾಹಂದರ, ಸಮಕಾಲೀನ ನಿರೂಪಣೆ ಹಾಗೂ ಯುವ ಪ್ರೇಕ್ಷಕರ ನಾಡಿಮಿಡಿತವನ್ನು ಅರಿತುಕೊಂಡ ಸಿನಿಮಾ ಶೈಲಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಇದೀಗ ತಮ್ಮ ವೃತ್ತಿಜೀವನದ ಮತ್ತೊಂದು ಹೊಸ ಹಂತಕ್ಕೆ ಕಾಲಿಡುತ್ತಿದ್ದಾರೆ.
ʻತುಂಟಾಟʼ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಇಂದ್ರಜಿತ್ ಲಂಕೇಶ್, ಬಳಿಕ ಮೊನಾಲಿಸಾ, ಐಶ್ವರ್ಯ, ಹುಡುಗ ಹುಡುಗಿ, ಲವ್ ಯು ಆಲಿಯಾ ಹಾಗೂ ಶಕೀಲಾ ಸೇರಿದಂತೆ ಹಲವು ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. ವಿಭಿನ್ನ ಕಾಲಘಟ್ಟಗಳಲ್ಲಿ ಹೊಸತನ ಅಳವಡಿಸಿಕೊಳ್ಳುತ್ತಾ, ಮನರಂಜನೆ ಹಾಗೂ ಸಮಕಾಲೀನ ವಿಚಾರಗಳನ್ನ ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವನ್ನ ಮುಂದುವರಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರ 25 ವರ್ಷಗಳ ಪಯಣದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಿದ ಅಂಶವೂ ವಿಶೇಷವಾಗಿ ಗಮನ ಸೆಳೆಯುತ್ತದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಐಶ್ವರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಇದೇ ರೀತಿ ಭೂಮಿಕಾ ಚಾವ್ಲಾ, ಛಾಯಾ ಸಿಂಗ್ ಹಾಗೂ ವಸುಂಧರಾ ದಾಸ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರಿಗೆ ಅವರ ಸಿನಿಮಾಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿವೆ.
ಚಿತ್ರರಂಗದ ಜೊತೆಗೆ ಪತ್ರಿಕೋದ್ಯಮದೊಂದಿಗೂ ತಮ್ಮ ನಂಟನ್ನು ಮುಂದುವರಿಸಿಕೊಂಡಿರುವ ಇಂದ್ರಜಿತ್ ಲಂಕೇಶ್, ಲಂಕೇಶ್ ಪತ್ರಿಕೆ ಮೂಲಕವೂ ತಮ್ಮದೇ ಆದ ಗುರುತನ್ನು ಉಳಿಸಿಕೊಂಡಿದ್ದಾರೆ. ಸಿನಿಮಾ, ಪತ್ರಿಕೋದ್ಯಮ ಹಾಗೂ ಸೃಜನಶೀಲತೆಯ ವಿವಿಧ ಆಯಾಮಗಳಲ್ಲಿ ತಮ್ಮ ಪಯಣವನ್ನು ಮುಂದುವರಿಸಿರುವ ಅವರು, ಇದೀಗ ಬಹುಭಾಷಾ ಸಿನಿಮಾ Jai Hind, Jai Sindh: A Love Story ಮೂಲಕ ಮತ್ತೊಂದು ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ. 25 ವರ್ಷಗಳ ಈ ಪಯಣವು ಸಿನಿಮಾ ನಿರ್ಮಾಣದ ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮತ್ತು ಹೊಸ ಕಥೆಗಳನ್ನು ಪ್ರೇಕ್ಷಕರ ಮುಂದೆ ತರುವ ನಿರಂತರ ಪ್ರಯತ್ನಕ್ಕೂ ಸಾಕ್ಷಿಯಾಗಿದೆ.

ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಇಂದ್ರಜಿತ್ ಲಂಕೇಶ್ ಅವರಿಗೆ ಅನೇಕರು ಶುಭ ಹಾರೈಸಿದ್ದಾರೆ. ಅವರ ಹುಟ್ಟುಹಬ್ಬಕ್ಕೂ ಶುಭಾಶಯ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೊಸ ಕಥೆಗಳು, ಹೊಸ ಪ್ರಯತ್ನಗಳು ಹಾಗೂ ಹೊಸ ಪ್ರತಿಭೆಗಳೊಂದಿಗೆ ಅವರ ಪಯಣ ಮತ್ತಷ್ಟು ಸಮೃದ್ಧವಾಗಲಿ ಎಂದು ಬರೆದುಕೊಂಡಿದ್ದಾರೆ.

