-ರೈತರ ಬರ ಸಂಕಷ್ಟ, ಕಸ್ತೂರಿರಂಗನ್ ವರದಿ ಸೇರಿ ಗಂಭೀರ ವಿಚಾರಗಳ ಸಮಗ್ರ ಚರ್ಚೆಗೆ ಒತ್ತಾಯ
ಬೆಂಗಳೂರು: ರಾಜ್ಯದ ವಿವಿಧ ಗಂಭೀರ ಸಮಸ್ಯೆಗಳು ಹಾಗೂ ಸಂಕಷ್ಟಗಳ ಕುರಿತು ಸಮಗ್ರವಾಗಿ ಚರ್ಚಿಸಲು ಕೇವಲ ಮೂರು ದಿನಗಳ ವಿಶೇಷ ಅಧಿವೇಶನ ಸಾಕಾಗುವುದಿಲ್ಲ. ಆದ್ದರಿಂದ ವಿಶೇಷ ಅಧಿವೇಶನವನ್ನು ಕನಿಷ್ಠ ಒಂದು ವಾರಕ್ಕೆ ವಿಸ್ತರಿಸಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿ, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ, ಸಂಕಷ್ಟದಲ್ಲಿರುವ ರೈತರು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಆದರೆ ಈ ಎಲ್ಲ ಗಂಭೀರ ವಿಚಾರಗಳಿಗೆ ಸಮಗ್ರ ಚರ್ಚೆ ನಡೆಸಲು ಮೂರು ದಿನಗಳು ಸಾಕಾಗುವುದಿಲ್ಲ. ಹೀಗಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸೇರಿದಂತೆ ನಾವು ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ, ಮತ್ತೊಂದು ವಿಕೆಟ್ ಬೀಳುವ ಭಯ: ಆಶೋಕ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಮಾತನಾಡುತ್ತಾ, ಬಿಜೆಪಿಯವರು ಜನರ ಭಾವನೆಗಳ ಮೇಲೆ ಆಡಳಿತ ನಡೆಸುತ್ತಾರೆ ಹಾಗೂ ಕಾಂಗ್ರೆಸ್ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಕಳೆದ ಮೂರು ಕಾಲು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದೆಯೇ ಅಥವಾ ಜನರ ಬದುಕಿನೊಂದಿಗೆ ಚೆಲ್ಲಾಟವಾಡಿದೆಯೇ ಎಂಬುದನ್ನೂ ಈ ಅಧಿವೇಶನದಲ್ಲಿ ಚರ್ಚಿಸಬೇಕಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಚಲೋ ಹೋರಾಟದ ಪರಿಣಾಮ:
ಬಿಜೆಪಿ ಹಮ್ಮಿಕೊಂಡಿದ್ದ 10 ದಿನಗಳ ಬಳ್ಳಾರಿ ಚಲೋ (Ballary Chalo) ಪಾದಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ. ಈ ಹೋರಾಟದಿಂದ ರಾಜ್ಯ ಸರ್ಕಾರದ (State Govt) ಮೇಲೆ ಒತ್ತಡ ನಿರ್ಮಾಣವಾಗಿದೆ. ಸರ್ಕಾರದ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಬಳ್ಳಾರಿ ಚಲೋ ಹೋರಾಟದಿಂದ ಮುಖ್ಯಮಂತ್ರಿಗಳು ವಿಚಲಿತರಾದಂತೆ ಕಾಣುತ್ತಿದೆ. ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಸರ್ಕಾರದ ಮುಖ್ಯಸ್ಥರು ಹೆಲಿಕಾಪ್ಟರ್ ಮೂಲಕ ಕಣಕ್ಕಿಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಹೋರಾಟದ ಪರಿಣಾಮವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ – ಜೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
ಹೋರಾಟದ ಒತ್ತಡಕ್ಕೆ ಮಣಿದು ಅಧಿವೇಶನ:
ಬಿಜೆಪಿ ನಡೆಸಿದ ನಿರಂತರ ಹೋರಾಟದ ಒತ್ತಡಕ್ಕೆ ಮಣಿದು ಸರ್ಕಾರಕ್ಕೆ ವಿಶೇಷ ಅಧಿವೇಶನ ಕರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಧಿವೇಶನದಲ್ಲಿ ಬಿಜೆಪಿ ಹಾಗೂ ನಮ್ಮ ಮಿತ್ರಪಕ್ಷ ಜೆಡಿಎಸ್ ಒಟ್ಟಾಗಿ ರೈತರ ಪರವಾಗಿ ಬಲವಾಗಿ ಧ್ವನಿ ಎತ್ತಲಿವೆ. ರಾಜ್ಯದ ರೈತರು ಎದುರಿಸುತ್ತಿರುವ ಬರಗಾಲದ ಸಂಕಷ್ಟ, ಬೆಳೆ ನಷ್ಟ, ರೈತರ ಸಮಸ್ಯೆಗಳು ಸೇರಿದಂತೆ ಅವರ ಬದುಕಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮಘಟ್ಟ ಮತ್ತು ಕಾಡಂಚಿನ ಜನರ ರಕ್ಷಣೆಗೆ ಒತ್ತು:
ಕಸ್ತೂರಿರಂಗನ್ ವರದಿ ವಿಚಾರದಲ್ಲಿಯೂ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಪಶ್ಚಿಮಘಟ್ಟದ ಪರಿಸರ ಮತ್ತು ಅರಣ್ಯವನ್ನು ರಕ್ಷಿಸುವುದರ ಜೊತೆಗೆ, ಕಾಡಂಚಿನ ಪ್ರದೇಶಗಳಲ್ಲಿ ಬದುಕುತ್ತಿರುವ ರೈತರು ಹಾಗೂ ಜನರ ಹಿತಾಸಕ್ತಿಯನ್ನೂ ರಕ್ಷಿಸಬೇಕಾಗಿದೆ. ಅರಣ್ಯ ಸಂರಕ್ಷಣೆ ಮತ್ತು ಜನರ ಬದುಕು—ಇವೆರಡನ್ನೂ ಸಮತೋಲನದಿಂದ ಕಾಪಾಡುವ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಕುರಿತು ವಿಶೇಷ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಮಗ್ರವಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರದಲ್ಲಿ 105 ಬಾರಿ ಕಾಣಿಕೆ ಕಳವು, ಸೆ.25ರ ಒಳಗಡೆ ಚಾರ್ಜ್ಶೀಟ್ ಸಲ್ಲಿಕೆ: ಸುಪ್ರೀಂಗೆ ಎಸ್ಐಟಿ

