ಹಾಸನ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದು ಅರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ (K.M Shivalinge Gowda) ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾ ಸೇವಾ (Praja Seva) ಆಂದೋಲನ ಸಭೆಯಲ್ಲಿ ಮಾತಿನ ಭರದಲ್ಲಿ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ ಎಂಬ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಕಲೇಶಪುರದಲ್ಲಿ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿ ಕೆಲಸ ಮಾಡಿಕೊಡಬೇಕಾದರೆ ಲಂಚ ಕೇಳುತ್ತಾರೆ ಎಂದು ಹೇಳಿದ್ದರು. ಕಾನೂನಿನಲ್ಲಿ ಅವಕಾಶ ಇಲ್ಲ, ಕೊಡಬಾರದು ಎಂದು ನಾನು ಹೇಳಿದೆ. ಇಷ್ಟು ದಿನದೊಳಗೆ ಕೆಲಸ ಮಾಡಿಕೊಡಬೇಕು ಎಂದು ಅಲ್ಲೇ ಅಧಿಕಾರಿಗೆ ತಾಕೀತು ಮಾಡಿದೆ. ಕೆಲಸ ಆದ ಮೇಲೆ ಅಧಿಕಾರಿಯನ್ನು ಗೌರವಯುತವಾಗಿ ಮಾತನಾಡಿಸಿ ಹೋಗಿ ಎಂದು ನಾನು ಹೇಳಿದೆ. ಆ ವ್ಯಕ್ತಿ ಅವರಿಗೆ ಗೌರವ ಏಕೆ ಕೊಡಬೇಕು ಎಂದರು. ನೀನು ಯಾರಿಗೂ ಒಂದು ಪೈಸೆ ಲಂಚ ಕೊಡಬೇಡ, ಗೌರವಯುತವಾಗಿ ಅಧಿಕಾರಿಯನ್ನು ನೋಡಬೇಕು ಎಂದಿದ್ದನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಷಿ ಕೊಟ್ಟರು. ಇದನ್ನೂ ಓದಿ: ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಮಾತಿನ ಭರದಲ್ಲಿ ಶಿವಲಿಂಗೇಗೌಡ ಹೇಳಿಕೆ
ನಾನು ಆರ್.ಅಶೋಕ್ ಅವರ ಜೊತೆಯೂ ಮಾತನಾಡಿದೆ. ನೀವು ಈ ರೀತಿ ಮಾತನಾಡಿರೋದು ಗೊತ್ತಿಲ್ಲ ಎಂದು ಹೇಳಿದರು. ನಾನು ನೂರು ಬಾರಿ ಲಂಚ ಪಡೆಯಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಕೆಲಸ ಮಾಡಿಕೊಟ್ಟ ಮೇಲೆ ಗೌರವಯುತವಾಗಿ ಕಾಣಬೇಕು. ನಮಸ್ಕಾರ ಮಾಡಿ ನನ್ನ ಕೆಲಸ ಮಾಡಿಕೊಟ್ಟಿದ್ದೀರಾ ಎಂದು ಹೇಳಬೇಕು. ಕೆಲಸ ಆದ ಮೇಲೆ ಒಂದು ಹೂವಿನ ಹಾರವನ್ನು ಹಾಕಿ ಬರುತ್ತಾರೆ. ನಾನು ಆ ದೃಷ್ಟಿಯಲ್ಲಿ ಹೇಳಿದೆ. ಈ ರಾಜ್ಯದ ಜನ ತಪ್ಪು ತಿಳಿದುಕೊಳ್ಳಬೇಡಿ. ದಯಮಾಡಿ ಇದರ ಅರ್ಥವನ್ನು ಬೇರೆ ರೀತಿ ಕಲ್ಪಿಸಬೇಡಿ, ಇದನ್ನು ಇಲ್ಲಿಗೆ ಸಮಾಪ್ತಿ ಮಾಡಿ ಎಂದರು. ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

