ಪ್ರಕೃತಿಯೇ ಒಂದು ಅದ್ಭುತ ಪ್ರಯೋಗ ಶಾಲೆ. ಇಲ್ಲಿ ಪುಟ್ಟ ಜೀವಿಗಳೂ ಮನುಷ್ಯನಿಗೆ ಸವಾಲೊಡ್ಡುವಂತಹ ಕೌಶಲಗಳನ್ನು ಹೊಂದಿವೆ. ಅಂತಹ ಅಚ್ಚರಿಗಳ ಸಾಲಿನಲ್ಲಿ ಜೇಡರ ಬಲೆಯೂ ಒಂದು.
ಹೌದು..! ಮನೆಯ ಮೂಲೆ, ಮರದ ಕೊಂಬೆ, ಪೊದೆಗಳ ನಡುವೆ ಕಾಣಸಿಗುವ ಜೇಡರ ಬಲೆ ನೋಡಲು ತುಂಬಾ ಸೂಕ್ಷ್ಮ ಎನಿಸಬಹುದು. ಆದರೆ ಅದರ ಹಿಂದಿರುವ ರಹಸ್ಯ ಮಾತ್ರ ಬೆರಗುಗೊಳಿಸುವಂಥದ್ದು. ಗಾತ್ರದಲ್ಲಿ ಅತ್ಯಂತ ಚಿಕ್ಕದಾದ ಜೇಡವೊಂದು ತನ್ನ ದೇಹದಿಂದಲೇ ಉತ್ಪಾದಿಸುವ ತೆಳು ರೇಷ್ಮೆಯಂತಹ ಎಳೆಯಲ್ಲಿ ಅಡಗಿರುವ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಬಾಳಿಕೆ ವಿಜ್ಞಾನಿಗಳನ್ನೇ ನಿಬ್ಬೆರಗಾಗಿಸಿದೆ.
ಸಾಮಾನ್ಯವಾಗಿ ರೇಷ್ಮೆ ಎಂದರೆ ರೇಷ್ಮೆ ಹುಳು ನೆನಪಾಗುತ್ತದೆ. ಆದರೆ ಜೇಡ ಉತ್ಪಾದಿಸುವ ರೇಷ್ಮೆ ಅಥವಾ ‘ಸ್ಪೈಡರ್ ಸಿಲ್ಕ್’ (Spider Silk) ಸಾಮಾನ್ಯ ರೇಷ್ಮೆಗಿಂತಲೂ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಅತ್ಯಂತ ಬಲಿಷ್ಠವಾದ ನೈಸರ್ಗಿಕ ನಾರುಗಳಲ್ಲಿ ಇದೂ ಒಂದು. ಹೀಗಾಗಿಯೇ ವಿಜ್ಞಾನಿಗಳು ಜೇಡರ ಬಲೆಯನ್ನು ಕೇವಲ ಕೀಟಗಳನ್ನು ಹಿಡಿಯುವ ಸಾಧನವಾಗಿ ನೋಡದೆ, ಭವಿಷ್ಯದ ಅತ್ಯಾಧುನಿಕ ವಸ್ತುಗಳ ತಯಾರಿಕೆಗೆ ಮಾದರಿಯಾಗಿ ಪರಿಗಣಿಸುತ್ತಿದ್ದಾರೆ.
ಜೇಡರ ಬಲೆಯಲ್ಲಿ ಅಡಗಿದೆ ಉಕ್ಕಿನ ಶಕ್ತಿ!
ಜೇಡರ ಬಲೆಯ ಒಂದು ಎಳೆ ಮೇಲೆ ಬಲ ಪ್ರಯೋಗಿಸಿದಾಗ ಅದು ಸುಲಭವಾಗಿ ತುಂಡಾಗದೆ, ಮತ್ತೆ ತನ್ನ ಆಕಾರಕ್ಕೆ ಮರಳುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಕೆಲವು ವಿಧದ ಜೇಡರ ರೇಷ್ಮೆಯನ್ನು ತೂಕದ ಆಧಾರದಲ್ಲಿ ಉಕ್ಕು ಮತ್ತು ಕೆವ್ಲರ್ನಂತಹ ಕೃತಕ ನಾರುಗಳಿಗೆ (ಅರಾಮಿಡ್ ಫೈಬರ್ಗಳು) ಹೋಲಿಸಲಾಗುತ್ತದೆ. ಆದರೆ ಎಲ್ಲ ವಿಧದ ಜೇಡರ ಬಲೆಗಳು ಉಕ್ಕಿಗಿಂತ ಬಲಿಷ್ಠವಲ್ಲ.
ಜೇಡ ತನ್ನ ದೇಹದ ಹಿಂಭಾಗದಲ್ಲಿರುವ ವಿಶೇಷ ಗ್ರಂಥಿಗಳ ಮೂಲಕ ಈ ನಾರನ್ನು ಉತ್ಪಾದಿಸುತ್ತದೆ. ಈ ಗ್ರಂಥಿಗಳಲ್ಲಿ ‘ಸ್ಪೈಡ್ರೊಯಿನ್’ (Spidroin) ಎಂಬ ಪ್ರೋಟೀನ್ಗಳು ದ್ರವ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಇವುಗಳೇ ಮುಂದೆ ಗಟ್ಟಿಯಾದ ಬಲೆಯ ಎಳೆಗಳಾಗಿ ರೂಪಾಂತರಗೊಳ್ಳುತ್ತವೆ. ಅಚ್ಚರಿಯ ಸಂಗತಿಯೆಂದರೆ, ಈ ಪ್ರಕ್ರಿಯೆಗೆ ಜೇಡಕ್ಕೆ ಯಾವುದೇ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ತನ್ನ ದೇಹದಲ್ಲಿರುವ ನೈಸರ್ಗಿಕ ವ್ಯವಸ್ಥೆಯನ್ನೇ ಬಳಸಿಕೊಂಡು ಅದು ಅತ್ಯಂತ ಸಂಕೀರ್ಣವಾದ ನಾರನ್ನು ಸೃಷ್ಟಿಸುತ್ತದೆ.
ಜೇಡರ ಬಲೆಯ ಪ್ರತಿಯೊಂದು ಎಳೆಯೂ ಒಂದೇ ರೀತಿಯ ಕೆಲಸ ಮಾಡುವುದಿಲ್ಲ. ಜೇಡಗಳು ಅಗತ್ಯಕ್ಕೆ ಅನುಗುಣವಾಗಿ ವಿವಿಧ ಗುಣಲಕ್ಷಣಗಳ ಎಳೆಗಳನ್ನು ಉತ್ಪಾದಿಸುತ್ತವೆ. ಜೇಡವನ್ನು ಮೇಲಿನಿಂದ ಕೆಳಕ್ಕೆ ಇಳಿಸಲು ಮತ್ತು ಬಲೆಯನ್ನು ಆಧಾರವಾಗಿರಿಸಲು ಬಳಸುವ ‘ಡ್ರ್ಯಾಗ್ಲೈನ್ ಸಿಲ್ಕ್’ ಉತ್ಪಾದಿಸುತ್ತವೆ. ಇದು ತುಂಬಾ ಬಲಿಷ್ಠವಾಗಿರುತ್ತದೆ. ಬಲೆಯಲ್ಲಿ ಸಿಲುಕಿದ ಕೀಟಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಉಂಟಾಗುವ ಒತ್ತಡವನ್ನು ತಡೆದುಕೊಳ್ಳಲು ‘ಫ್ಲ್ಯಾಜೆಲ್ಲಿಫಾರ್ಮ್ ಸಿಲ್ಕ್’ ನೆರವಾಗುತ್ತದೆ. ಇನ್ನು ಕೀಟಗಳನ್ನು ಸುತ್ತಿ ಬಂಧಿಸಲು ‘ಅಸಿನಿಫಾರ್ಮ್ ಸಿಲ್ಕ್’ ಬಳಕೆಯಾಗುತ್ತದೆ. ಒಂದೇ ಜೀವಿಯ ದೇಹದಲ್ಲಿ ಇಷ್ಟೊಂದು ಬಗೆಯ ನೈಸರ್ಗಿಕ ನಾರುಗಳ ಉತ್ಪಾದನೆ ನಡೆಯುವುದು ಪ್ರಕೃತಿಯ ವಿಶೇಷತೆಗೆ ಸಾಕ್ಷಿಯಾಗಿದೆ.
ದ್ರವದಿಂದ ಗಟ್ಟಿಯಾದ ನಾರಾಗುವ ರಹಸ್ಯ
ಜೇಡದ ದೇಹದೊಳಗೆ ದ್ರವ ರೂಪದಲ್ಲಿರುವ ಪ್ರೋಟೀನ್ಗಳು ಹೊರಬರುವಾಗ ಅಷ್ಟು ಬಲಿಷ್ಠವಾದ ನಾರಾಗಿ ಹೇಗೆ ಬದಲಾಗುತ್ತವೆ ಎಂಬ ವಿಚಾರ ವಿಜ್ಞಾನಿಗಳಿಗೆ ಭಾರೀ ತಲೆಕೆಡಿಸಿತ್ತು. ಈ ರಹಸ್ಯವನ್ನು ಅರಿಯಲು ಹಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ದ್ರವ ರೂಪದಲ್ಲಿರುವ ಪ್ರೋಟೀನ್ಗಳು ನಾರಾಗಿ ಬದಲಾಗುವ ಮೊದಲು ಜೆಲ್ನಂತಹ ರಚನೆಗಳನ್ನು ರೂಪಿಸಬಹುದು ಎಂಬುದಕ್ಕೆ ಸಂಶೋಧಕರು ಕಂಡುಕೊಂಡಿದ್ದಾರೆ.
ಸ್ಯಾನ್ ಡಿಯಾಗೋ ಸ್ಟೇಟ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞ ಗ್ರೆಗೊರಿ ಹಾಲೆಂಡ್ ನೇತೃತ್ವದ ತಂಡವು ಕಪ್ಪು ವಿಧವೆ ಜೇಡಗಳ (Black Widow Spider) ಬಲೆಗಳನ್ನು ಅಧ್ಯಯನ ಮಾಡಿದೆ. ಸಂಶೋಧನೆಯಲ್ಲಿ ಅರ್ಜಿನೈನ್ (Arginine) ಮತ್ತು ಟೈರೋಸಿನ್ (Tyrosine) ಎಂಬ ಎರಡು ಆಮ್ಲಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ತಿಳಿದುಬಂದಿದೆ. ಫಾಸ್ಫೇಟ್ನಂತಹ ರಾಸಾಯನಿಕ ಅಂಶಗಳ ಪ್ರಭಾವದಿಂದ ಇವು ಪ್ರೋಟೀನ್ಗಳ ನಡುವೆ ದುರ್ಬಲ ಆಕರ್ಷಣೆಯನ್ನು ಸೃಷ್ಟಿಸಿ, ಅವುಗಳನ್ನು ಒಟ್ಟುಗೂಡಿಸಲು ನೆರವಾಗುತ್ತವೆ. ಸಂಶೋಧಕರು ಇವುಗಳನ್ನು ‘ಮಾಲಿಕ್ಯುಲರ್ ಸ್ಟಿಕ್ಕರ್ಸ್’ (Molecular Stickers) ಎಂದು ವಿವರಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಪ್ರೋಟೀನ್ಗಳ ಸರಪಳಿಗಳು ಕ್ರಮೇಣ ತಮ್ಮನ್ನು ತಾವು ಮರುಜೋಡಿಸಿಕೊಳ್ಳುತ್ತವೆ. ನಂತರ ‘ಬೀಟಾ ಶೀಟ್ಸ್’ (Beta Sheets) ಎಂಬ ಅತಿ ಸೂಕ್ಷ್ಮ ರಚನೆಗಳು ರೂಪುಗೊಳ್ಳುತ್ತವೆ. ಇವು ಪ್ರೋಟೀನ್ ಸರಪಳಿಗಳನ್ನು ಬಿಗಿಯಾಗಿ ಜೋಡಿಸಿ ನಾರಿಗೆ ಬಲ ನೀಡುತ್ತವೆ. ಅದೇ ಸಮಯದಲ್ಲಿ ಇತರ ಸಡಿಲವಾದ ಪ್ರೋಟೀನ್ ಭಾಗಗಳು ನಾರಿಗೆ ಹಿಗ್ಗುವ ಸಾಮರ್ಥ್ಯ ಒದಗಿಸುತ್ತವೆ. ಹೀಗೆ ಗಟ್ಟಿತನ ಮತ್ತು ಸ್ಥಿತಿಸ್ಥಾಪಕತ್ವ ಎರಡನ್ನೂ ಒಳಗೊಂಡ ವಿಶಿಷ್ಟ ರಚನೆ ಸಿದ್ಧವಾಗುತ್ತದೆ.
ವೈದ್ಯಕೀಯದಿಂದ ರಕ್ಷಣಾ ಸಾಮಗ್ರಿಗಳವರೆಗೆ!
ಜೇಡರ ಬಲೆಯ ಈ ವಿಶೇಷ ಗುಣಗಳು ಭವಿಷ್ಯದ ಹಲವು ತಂತ್ರಜ್ಞಾನಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಗಾಯಗಳಿಗೆ ಹೊಲಿಗೆ ಹಾಕುವ ದಾರಗಳು, ಚರ್ಮದ ಅಂಗಾಂಶಗಳ ಪುನರುತ್ಪಾದನೆ, ನರಗಳ ದುರಸ್ತಿ ಹಾಗೂ ಕೃತಕ ಅಂಗಾಂಶಗಳ ತಯಾರಿಕೆಯಲ್ಲಿ ಇದರ ಬಳಕೆಯ ಬಗ್ಗೆ ಸಂಶೋಧನೆ ನಡೆಯುತ್ತಿದೆ. ದೇಹದೊಂದಿಗೆ ಹೊಂದಿಕೊಳ್ಳುವ ಗುಣಲಕ್ಷಣಗಳಿರುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಇದು ಗಮನ ಸೆಳೆದಿದೆ.
ಹಗುರವಾದರೂ ಬಲಿಷ್ಠವಾದ ರಕ್ಷಣಾ ಉಡುಪುಗಳು, ಹೆಲ್ಮೆಟ್ಗಳು, ವಾಹನಗಳ ಸೀಟ್ಬೆಲ್ಟ್ಗಳು ಮತ್ತು ಇತರ ಸುರಕ್ಷತಾ ಸಾಮಗ್ರಿಗಳ ತಯಾರಿಕೆಯಲ್ಲೂ ಸ್ಪೈಡರ್ ಸಿಲ್ಕ್ ಮಾದರಿಯ ನಾರುಗಳು ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಬಹುದು. ನೈಸರ್ಗಿಕವಾಗಿ ರೂಪುಗೊಳ್ಳುವ ಈ ಬಲೆಯ ವಿನ್ಯಾಸವನ್ನು ಅನುಕರಿಸಿ ಕೃತಕ ನಾರುಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಪ್ರಯೋಗಾಲಯದಲ್ಲಿ ಉತ್ಪಾದಿಸಿದ ನಾರುಗಳು ನೈಸರ್ಗಿಕ ಜೇಡರ ಬಲೆಯ ಗುಣಮಟ್ಟ ಮತ್ತು ಬಲವನ್ನು ನಿರಂತರವಾಗಿ ಹೊಂದುವಂತೆ ಮಾಡುವುದು ದೊಡ್ಡ ಸವಾಲಾಗಿದೆ.
ಜೇಡರ ಬಲೆಯನ್ನೇ ನಕಲು ಮಾಡಲು ಸಾಧ್ಯವೇ?
ಜೇಡರ ರೇಷ್ಮೆಯ ಮಹತ್ವ ಅರಿವಾಗುತ್ತಿದ್ದಂತೆ ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಪ್ರಯತ್ನಗಳು ಹೆಚ್ಚಾಗಿವೆ. ಆದರೆ ಜೇಡಗಳನ್ನು ಸಾಕುವುದು ಅಷ್ಟು ಸುಲಭವಲ್ಲ. ಹಲವು ಜಾತಿಯ ಜೇಡಗಳು ಕೆಲವು ಭಾಗಗಳಲ್ಲಿ ಮಾತ್ರ ಇರುತ್ತವೆ. ಕೆಲವು ಜಾತಿಗಳಲ್ಲಿ ವಿಷ ಇರುವುದರಿಂದ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಿ ಬಲೆ ಸಂಗ್ರಹಿಸುವುದು ಕಷ್ಟ. ಜೊತೆಗೆ ಒಂದು ಜೇಡದಿಂದ ದೊರೆಯುವ ಬಲೆ ಪ್ರಮಾಣವೂ ಕಡಿಮೆ. ಹೀಗಾಗಿ ವಿಜ್ಞಾನಿಗಳು ಜೇಡದ ಪ್ರೋಟೀನ್ಗಳನ್ನು ಪ್ರಯೋಗಾಲಯದಲ್ಲಿ ಉತ್ಪಾದಿಸುವ ಜೈವಿಕ ತಂತ್ರಜ್ಞಾನಗಳತ್ತ ಗಮನ ಹರಿಸಿದ್ದಾರೆ. ಕೃತಕವಾಗಿ ಸ್ಪೈಡ್ರೊಯಿನ್ ಪ್ರೋಟೀನ್ಗಳನ್ನು ಉತ್ಪಾದಿಸಿ ಅವುಗಳಿಂದ ನಾರುಗಳನ್ನು ರೂಪಿಸುವ ಪ್ರಯತ್ನಗಳು ಯಶಸ್ವಿಯಾಗಿದ್ದರೂ, ನೈಸರ್ಗಿಕ ನಾರಿನ ಎಲ್ಲ ಗುಣಗಳನ್ನು ಮರುಸೃಷ್ಟಿಸುವ ಕೆಲಸ ಇನ್ನೂ ಪ್ರಗತಿಯಲ್ಲಿದೆ.
ಒಂದು ಪುಟ್ಟ ಜೇಡ ತನ್ನ ಹೊಟ್ಟೆಯ ಹಿಂಭಾಗದಿಂದ ಹೊರಹಾಕುವ ಸೂಕ್ಷ್ಮ ಎಳೆಯ ಹಿಂದೆ ಇಷ್ಟೊಂದು ಸಂಕೀರ್ಣವಾದ ವಿಜ್ಞಾನ ಅಡಗಿದೆ ಎಂಬುದನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ. ಹಾಗೇನಾದರೂ ಈ ಪ್ರಯೋಗ ಸಕ್ಸಸ್ ಆದರೆ ನಮ್ಮ ಮಲೆನಾಡಿನ ಕಾಡುಗಳಲ್ಲಿರುವ ಜೇಡಗಳ ಬಲೆಯೂ ಬಳಕೆಗೆ ಬರಬಹುದೇನೋ ಎಂಬ ಕುತೂಹಲವೂ ಕಾಡುತ್ತದೆ.
