ಹೈದರಾಬಾದ್: 10 ರೂ. ಚಿಲ್ಲರೆ ಹಣಕ್ಕಾಗಿ ನಡೆದ ಗಲಾಟೆ ತಾರಕಕ್ಕೇರಿ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ (Hyderabad) ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಟ್ಟಪಲ್ಲಿ (Vattapally) ಎಂಬಲ್ಲಿ ನಡೆದಿದೆ.
ಭಾನುವಾರ (ಸೆ.20) ಸಂಜೆ ಈ ಘಟನೆ ನಡೆದಿದೆ. ಮೃತ ಆಟೋ ಚಾಲಕನನ್ನು ವಟ್ಟಪಲ್ಲಿ ನಿವಾಸಿ ಮೊಹಮ್ಮದ್ ಮುಕರ್ರಂ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಗಣೇಶ ಹಬ್ಬದ ವೇಳೆ 7ನೇ ಮಹಡಿಯಿಂದ ಮಾಂಸ ಎಸೆತ; ಮೂವರ ಬಂಧನ
ಹಲ್ಲೆ ನಡೆಸಿದವರಲ್ಲಿ ಇಬ್ಬರು ರೌಡಿಶೀಟರ್‌ಗಳಾಗಿದ್ದು, 10 ರೂ. ನೀಡುವಲ್ಲಿ 200 ರೂ. ನೀಡಿದ್ದರು. ಇದೇ ಕಾರಣಕ್ಕಾಗಿ ಆಟೋ ಚಾಲಕ ಹಾಗೂ ಒಂದು ಗುಂಪಿನ ನಡುವೆ ವಾಗ್ವಾದ ಶುರುವಾಗಿದೆ. ಬಳಿಕ ಗಲಾಟೆ ತಾರಕಕ್ಕೇರಿ ಗುಂಪಿನಲ್ಲಿದ್ದ ಜನರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ನಡುರಸ್ತೆಯಲ್ಲಿಯೇ ಚಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ AIMIM ನಾಯಕರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಒಂದೇ ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಕೊಲೆ ಇದಾಗಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 1.85 ಲಕ್ಷ ರೂ. ಸೀರೆಯುಟ್ಟು ಬಿಗ್ ಬಾಸ್ ವೇದಿಕೆಯಲ್ಲಿ ಮಿಂಚಿದ ತಮನ್ನಾ ಭಾಟಿಯಾ

