ಮಂಡ್ಯ: ಬರದ ಸಂಕಷ್ಟದಲ್ಲಿ ಅನ್ನದಾತ ಕಣ್ಣೀರು ಹಾಕುತ್ತಿದ್ದರೂ, ಸರ್ಕಾರ ಮಾತ್ರ ಅದ್ಧೂರಿ ಉತ್ಸವಗಳ ಆಚರಣೆಯಲ್ಲಿ ಮಗ್ನವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋಗಿದ್ದರೂ, ಈ ಬಾರಿ ಶ್ರೀರಂಗಪಟ್ಟಣದಲ್ಲಿ (Srirangapatna) ಬರೋಬ್ಬರಿ 11 ದಿನಗಳ ಕಾಲ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ದಸರಾ ಆಚರಿಸಲು ಸಿದ್ಧತೆ ನಡೆಯುತ್ತಿದೆ.
ಅಷ್ಟೇ ಅಲ್ಲದೆ, ಕೆಆರ್ಎಸ್ ಜಲಾಶಯದ (KRS Dam) ಬಳಿ ಕಾವೇರಿ ಆರತಿ ಮಾಡಲು ಹೊರಟಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮಳೆಯಿಲ್ಲದೆ ಬೆಳೆಗಳಿಗೆ ನೀರಿಲ್ಲದೇ ರೈತರು (Farmers) ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ರೈತರ ಹಿತ ಕಾಯಬೇಕಾದ ಸರ್ಕಾರ, ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿ ಕೆಆರ್ಎಸ್ ಜಲಾಶಯವನ್ನು ಸಂಪೂರ್ಣವಾಗಿ ಖಾಲಿ ಮಾಡುವ ಹಂತಕ್ಕೆ ಹೋಗಿದೆ.

ಈ ನಡುವೆ ಸರ್ಕಾರ ಅಕ್ಟೋಬರ್ 11 ರಿಂದ ಅಕ್ಟೋಬರ್ 21ರ ವರೆಗೆ ಶ್ರೀರಂಗಪಟ್ಟಣದಲ್ಲಿ 11 ದಿನಗಳ ಕಾಲ ಅದ್ಧೂರಿ ದಸರಾ ಹಾಗೂ ಕೆಆರ್ಎಸ್ ಡ್ಯಾಂ ಬಳಿ ಕಳೆದ ಬಾರಿಯಂತೆ ಕಾವೇರಿ ಆರತಿ ನಡೆಸಲು ನಿರ್ಧರಿಸಿದೆ. ಹೀಗಾಗಲೇ ಈ ಸಬಂಧ ಸಭೆಗಳು ನಡೆದಿದ್ದು, ಸಿದ್ಧತೆಗಳು ಆಭವಾಗಿವೆ.
ತಮಿಳುನಾಡಿಗೆ ನೀರು ಬಿಟ್ಟು, ಈಗ ನೀರಿಲ್ಲದೇ ಬಿಕೋ ಎನ್ನುತ್ತಿರುವ ಖಾಲಿ ಡ್ಯಾಮ್ಗೆ ಈಗ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ರೈತರು ಮತ್ತು ಸಾರ್ವಜನಿಕರು ತೀವ್ರವಾಗಿ ವ್ಯಂಗ್ಯವಾಡುತ್ತಿದ್ದಾರೆ. ಕುಡಿಯಲು ನೀರಿಲ್ಲ, ಬೆಳೆ ಒಣಗಿದೆ, ಇಂಥ ಸಮಯದಲ್ಲಿ 11 ದಿನಗಳ ಕಾಲ ಅದ್ಧೂರಿ ದಸರಾ ಆಚರಣೆ ಬೇಕೆ, ಇದನ್ನೇ ರೈತರಿಗೆ ಪರಿಹಾರ ಕೊಡಲು ಏಕೆ ಬಳಸಿಕೊಳ್ಳಬಾರದು ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಉತ್ಸವಗಳ ಹೆಸರಿನಲ್ಲಿ ಹಣ ಪೋಲು ಮಾಡುವ ಬದಲು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಬರ ಪರಿಹಾರ ನೀಡಬೇಕು ಎಂಬುದು ಈಗ ಜನರ ಆಗ್ರಹವಾಗಿದೆ. ಈಗ ಸರ್ಕಾರದ ಮುಂದಿನ ನಡೆ ಏನೆಂಬುದು ಕಾದು ನೋಡಬೇಕಿದೆ.

