– ಧರ್ಮ ಜನರನ್ನು ಒಗ್ಗೂಡಿಸುತ್ತದೆ, ಬಂಧಿಸುವುದಿಲ್ಲ ಎಂದ RSS ಮುಖ್ಯಸ್ಥ
ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ‘ಯುವ ಧರ್ಮ ಸಂಸತ್–2026’ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಧರ್ಮ ಮತ್ತು ‘ರಿಲಿಜನ್’ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಭಾಗವತ್ ವಿವರಿಸಿದರು. ‘ರಿಲಿಜನ್’ ಎಂಬ ಪದದ ಅರ್ಥ ಹಾಗೂ ಧರ್ಮದ ಪರಿಕಲ್ಪನೆ ಒಂದೇ ಅಲ್ಲ. ಧರ್ಮವನ್ನು ಅದರ ಮೂಲ ಅರ್ಥದಿಂದ ಬೇರ್ಪಡಿಸಿ ನೋಡಿದಾಗ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು. ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಭಾರತದ ಪರಂಪರೆಯಲ್ಲಿ ಧರ್ಮವು ಸತ್ಯ, ಕರ್ತವ್ಯ, ನೈತಿಕತೆ ಮತ್ತು ಎಲ್ಲರ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ. ‘ನಾವು ಬದುಕಬೇಕು, ಎಲ್ಲರನ್ನೂ ಬದುಕಲು ಬಿಡಬೇಕು’ ಎಂಬುದು ಭಾರತೀಯ ಚಿಂತನೆಯ ಪ್ರಮುಖ ಅಂಶವಾಗಿದೆ. ಧರ್ಮದ ಉದ್ದೇಶ ಜನರನ್ನು ವಿಭಜಿಸುವುದಲ್ಲ, ಸಮಾಜವನ್ನು ಒಗ್ಗೂಡಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಯುವಕರು ಧರ್ಮದ ಬಗ್ಗೆ ಚಿಂತನೆ ನಡೆಸುತ್ತಿರುವುದು ಸಂತಸದ ವಿಚಾರ. ಧರ್ಮದ ಅರಿವು ವಯಸ್ಸಾದ ಬಳಿಕ ಪಡೆಯಬೇಕಾದ ವಿಷಯವಲ್ಲ. ಜೀವನದ ಆರಂಭದಿಂದಲೇ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಭಾಗವತ್ ಹೇಳಿದರು.
ಮನುಷ್ಯ ತನ್ನ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಎಂಬ ಭಾವನೆಯಲ್ಲಿರುತ್ತಾನೆ. ಆದರೆ ಸೃಷ್ಟಿ ತನ್ನದೇ ಆದ ಪ್ರಕೃತಿ ಮತ್ತು ಧರ್ಮದ ಶಾಶ್ವತ ನಿಯಮಗಳಂತೆ ನಡೆಯುತ್ತದೆ. ಹೀಗಾಗಿ ಯುವಕರು ‘ಎಲ್ಲವೂ ನನಗೆ ಗೊತ್ತು’ ಎಂಬ ಅಹಂಕಾರವನ್ನು ಬದಿಗಿಟ್ಟು, ಮನಸ್ಸನ್ನು ತೆರೆದಿಟ್ಟುಕೊಂಡು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾಗವತ್ ಸಲಹೆ ನೀಡಿದರು. ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಜೀವನಪೂರ್ತಿ ನಡೆಯುವ ಅನ್ವೇಷಣೆಯಾಗಿದೆ ಎಂದರು. ಇದನ್ನೂ ಓದಿ: ನಿಠಾರಿ ಸರಣಿ ಮಕ್ಕಳ ಹತ್ಯಾಕಾಂಡ ಕೇಸ್ – ಖುಲಾಸೆಯಾಗಿದ್ದ ಸುರೇಂದರ್ ಕೋಲಿ ಆತ್ಮಹತ್ಯೆಗೆ ಶರಣು
ಧರ್ಮದ ಕುರಿತು ಅರಿವು ಪಡೆಯುವ ಮುನ್ನ ಮನಸ್ಸನ್ನು ಪೂರ್ವಗ್ರಹಗಳಿಂದ ಮುಕ್ತಗೊಳಿಸಬೇಕು. ವಿನಯ, ಆತ್ಮಚಿಂತನೆ ಮತ್ತು ನಿರಂತರ ಕಲಿಕೆಯ ಮೂಲಕ ಧರ್ಮದ ನಿಜವಾದ ಅರ್ಥವನ್ನು ಅರಿಯಬಹುದು ಎಂದು ಅವರು ಹೇಳಿದರು.

