– ಭೇಟಿ ಮಾಡಲು ಬಂದಿದ್ದ ಸ್ನೇಹಿತ, ಇತರ ಮೂವರನ್ನ ಕರೆತಂದು ನೀಚ ಕೃತ್ಯ
ನವದೆಹಲಿ: ನಾಲ್ವರು ಯುವಕರ (Youths) ಗುಂಪೊಂದು 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದು ಆಕೆಯ ಮೃತದೇಹವನ್ನ ಬಯಲು ಪ್ರದೇಶದಲ್ಲಿ ಎಸೆದಿರುವ ಘಟನೆ ದೆಹಲಿ (Delhi) ಹೊರವಲಯದ ಸ್ವರೂಪ್ ನಗರದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು, 19 ವರ್ಷದ ಯುವಕ ಸೇರಿ ಬಂಧಿಸಲಾಗಿದೆ. ಆರೋಪಿಗಳ ಪೈಕಿ ಮೂವರು ಅತ್ಯಾಚಾರ ಎಸಗಿದ್ದಾರೆ. ಮತ್ತೋರ್ವ ಅತ್ಯಾಚಾರ ಎಸಗದಿದ್ದರೂ ಹತ್ಯೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಸದ್ಯ ತನಿಖಾಧಿಕಾರಿಗಳು ಹೇಳಿಕೆಗಳನ್ನ ದಾಖಲಿಸಿಕೊಂಡಿದ್ದು, ಪ್ರತಿಯೊಬ್ಬರ ಹೇಳಿಕೆಯನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಘಟನೆ ನಡೆದಿದ್ದು, ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಸೆ.12 ರಂದು ಘಟನೆ ನಡೆದಿದೆ. ಮರುದಿನ ಬೆಳಗ್ಗೆ ಕುಶಕ್ ರಸ್ತೆಯ ಪಕ್ಕದ ಬಯಲು ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡಕ್ಕೆ ಆರಂಭದಲ್ಲಿ ಗುರುತು ಸಿಕ್ಕಿರಲಿಲ್ಲ. ಅಲ್ಲದೇ ಬಾಲಕಿಗೆ 8 ಬಾರಿ ಇರಿಯಲಾಗಿತ್ತು.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಪೊಲೀಸರು ಬಿಎನ್ಎಸ್ (BNS) ನ ಸೆಕ್ಷನ್ 103(1) (ಹತ್ಯೆ), 238(A) (ಸಾಕ್ಷ್ಯ ನಾಶಪಡಿಸುವುದು ಅಥವಾ ಅಪರಾಧಿಯನ್ನ ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು), 65(1) (ಅತ್ಯಾಚಾರ) ಮತ್ತು 3(5) (ಸಾಮಾನ್ಯ ಉದ್ದೇಶ) ಹಾಗೂ ಪೋಕ್ಸೊ (POCSO) ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಿಕೊಂಡಿದ್ದರು.
ಬಳಿಕ ಡಿಸಿಪಿ (ಹೊರ ದೆಹಲಿ ಉತ್ತರ) ಶೋಭಿತ್ ಡಿ. ಸಕ್ಸೇನಾ ಅವರು, ಹೆಚ್ಚುವರಿ ಡಿಸಿಪಿ ಆರ್. ಲೋಕೇಶ್ವರನ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನ ರಚನೆ ಮಾಡಿದ್ರು. ಪ್ರಕರಣಕ್ಕೆ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ ಆರೋಪಿಗಳನ್ನ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ನಂತರ ಪೊಲೀಸರು ಆ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ರು. ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದ 50ಕ್ಕೂ ಹೆಚ್ಚು ಕ್ಯಾಮೆರಾಗಳ ದೃಶ್ಯಾವಳಿಗಳನ್ನ ಪರಿಶೀಲಿಸಲಾಯಿತು.

ಈ ವೇಳೆ ಘಟನೆ ನಡೆದ ಸಮಯದಲ್ಲಿ ಆ ಪ್ರದೇಶದ ಬಳಿ ಟೆಂಪೋವೊಂದು ಚಲಿಸುತ್ತಿರುವುದನ್ನ ಪೊಲೀಸರು ಗಮನಿಸಿದರು. ಆದ್ರೆ ಕತ್ತಲು ಇದ್ದ ಕಾರಣ ನೋಂದಣಿ ಸಂಖ್ಯೆಯೂ ಅಸ್ಪಷ್ಟವಾಗಿತ್ತು. ನಂತರ ತನಿಖಾಧಿಕಾರಿಗಳು ವಿವಿಧ ಸಿಸಿಟಿವಿ ಸ್ಥಳಗಳಲ್ಲಿ ವಾಹನದ ಚಲನವಲನ ಪತ್ತೆಹಚ್ಚಿದರು. ವಿಚಾರಣಾ ಅಂತದಲ್ಲಿ ಶಂಕಿತ ವಾಹವನ್ನ ಖಚಿತಪಡಿಸಿಕೊಂಡರು.
ಸೆಪ್ಟೆಂಬರ್ 15 ಮತ್ತು 16 ರ ಮಧ್ಯರಾತ್ರಿ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಲಾಯಿತು. ಇದರ ಪರಿಣಾಮವಾಗಿ ಸ್ವರೂಪ್ ನಗರದ ಖಡ್ಡಾ ಕಾಲೋನಿಯಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ಪತ್ತೆಯಾಗಿತ್ತು. ಪೊಲೀಸರು ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಿದರು. ಬಳಿಕ ಕೃತ್ಯ ಎಸಗಿದ ನಾಲ್ವರು ಆರೋಪಿಗಳನ್ನ ಬಂಧಿಸಿದ್ರು.
ಕೃತ್ಯ ನಡೆದಿದ್ದು ಹೇಗೆ?
ಹತ್ಯೆಯಾದ ಅಪ್ರಾಪ್ತೆ ಸೆ.12 ರಂದು ತನ್ನ ಸ್ನೇಹಿತನನ್ನ ಭೇಟಿಯಾಗಲು ದೆಹಲಿ ಹೊರವಲಯಕ್ಕೆ ಹೋಗಿದ್ದಳು. ಆದ್ರೆ ಆರೋಪಿ ಸ್ನೇಹಿತ ತನ್ನೊಂದಿಗೆ ಇನ್ನೂ ಮೂವರನ್ನ ಕರೆಸಿಕೊಂಡಿದ್ದ. ಅವರೆಲ್ಲರೂ ಅಪ್ರಾಪ್ತನೊಬ್ಬನ ಸಹೋದರರಾಗಿದ್ದರು. ಬಳಿಕ ಆಕೆಯನ್ನ ಸರಕು ಸಾಗಣೆ ಟೆಂಪೋದಲ್ಲಿ ಕೂರಿಸಿಕೊಂಡು ತೆರಳಿದ್ದರು. ಟೆಂಪೋದಲ್ಲಿ ಇದ್ದಾಗಲೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆ ದೂರು ನೀಡಬಹುದು ಎಂದು ಭಾವಿಸಿ ಹಲವು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಸದ್ಯ ಆರೋಪಿಗಳನ್ನ ಬಂಧಿಸಿದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ 2 ಚಾಕುಗಳು, ಘಟನೆ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆಗಳನ್ನ ವಶಪಡಿಸಿಕೊಳ್ಳಲಾಗಿದೆ. ಟೆಂಪೋವನ್ನು ಕೂಡ ಜಪ್ತಿ ಮಾಡಲಾಗಿದೆ. ವಿಧಿವಿಜ್ಞಾನ ಹಾಗೂ ಇತರ ಸಾಕ್ಷ್ಯಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.

