– ‘ಡಬಲ್ ರಾಯಧನ’ಕ್ಕೆ ಬ್ರೇಕ್ ಹಾಕಿ
– ನಿರ್ಮಾಣ ಕಾಮಗಾರಿಗಳಿಗೆ ಭಾರಿ ಹೊಡೆತ
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿಯನ್ನು ವಿರೋಧಿಸಿ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರು (Quarry, Crusher Owners) ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ(Indefinite Strike) ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಜಲ್ಲಿ ಮತ್ತು ಎಂ-ಸ್ಯಾಂಡ್ ಉತ್ಪಾದನೆ ಹಾಗೂ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ರಸ್ತೆ, ಮನೆ, ವಾಣಿಜ್ಯ ಕಟ್ಟಡ ಸೇರಿದಂತೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು ಸಂಕಷ್ಟಕ್ಕೆ ಸಿಲುಕಿವೆ.
ಮುಷ್ಕರ ಯಾಕೆ?
ಒಂದೇ ಕಲ್ಲು ಉತ್ಪನ್ನಕ್ಕೆ ಎರಡು ಬಾರಿ ರಾಯಧನ (ರಾಜಧನ) ವಸೂಲಿ ಮಾಡುತ್ತಿರುವುದನ್ನು ಮಾಲೀಕರು ತೀವ್ರವಾಗಿ ಖಂಡಿಸಿದ್ದಾರೆ. ಲೋಕೋಪಯೋಗಿ (PWD), ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಗಣಿ ಉತ್ಪನ್ನಗಳಿಗೆ ನೇರವಾಗಿ ರಾಯಧನ ಕಡಿತ ಮಾಡಲಾಗುತ್ತದೆ. ಇದರ ಜೊತೆಗೆ ಕ್ವಾರಿ ಹಾಗೂ ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಯಧನ ಸಂಗ್ರಹಿಸಲಾಗುತ್ತಿದ್ದು, ಇದು ನೇರ ಆರ್ಥಿಕ ಹೊರೆಯಾಗಿದೆ ಎಂದು ಮಾಲೀಕರು ದೂರಿದ್ದಾರೆ. ಇದನ್ನೂ ಓದಿ: ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? – ಪ್ರತಾಪ್ ಸಿಂಹ

ಒಂದೇ ಕಚ್ಚಾ ಉತ್ಪನ್ನಕ್ಕೆ ಎರಡು ಬಾರಿ ಶುಲ್ಕ ವಿಧಿಸುವುದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಈ ಕೂಡಲೇ ‘ಏಕೀಕೃತ ರಾಯಧನ ನೀತಿ’ ಜಾರಿಗೊಳಿಸಿ ಕೇವಲ ಒಂದೇ ಹಂತದಲ್ಲಿ ಮಾತ್ರ ರಾಯಧನ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮಗಾರಿಗಳು ಸ್ತಬ್ಧ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನೂರಾರು ಕ್ವಾರಿ ಮತ್ತು ಕ್ರಷರ್ ಘಟಕಗಳು ಸಂಪೂರ್ಣ ಬಾಗಿಲು ಮುಚ್ಚಿವೆ. ಜಲ್ಲಿಕಲ್ಲು, ಕಾಂಕ್ರೀಟ್ ಪುಡಿ ಹಾಗೂ ಎಂ-ಸ್ಯಾಂಡ್ ಉತ್ಪಾದನೆ, ಲೋಡಿಂಗ್ ಮತ್ತು ಸಾಗಣೆ ಸಂಪೂರ್ಣ ಬಂದ್ ಆಗಿದೆ.
ಈ ಮುಷ್ಕರ ಹೀಗೇ ಮುಂದುವರಿದರೆ ಖಾಸಗಿ ಮನೆಗಳು, ಅಪಾರ್ಟ್‌ಮೆಂಟ್‌ಗಳು, ರಸ್ತೆ, ಸೇತುವೆ ಹಾಗೂ ಬೃಹತ್ ಮೂಲಸೌಕರ್ಯ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸರ್ಕಾರದ ಮಟ್ಟದಲ್ಲಿ ತಕ್ಷಣ ಮಾತುಕತೆ ನಡೆದು ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕ್ವಾರಿ-ಕ್ರಷರ್ ಸಂಘದ ಮುಖಂಡರು ಹಾಗೂ ವಿತರಕರು ಎಚ್ಚರಿಕೆ ನೀಡಿದ್ದಾರೆ.

