ನವದೆಹಲಿ: ಟೀಂ ಇಂಡಿಯಾ ಆಲ್‌ರೌಂಡರ್ ಆಟಕ್ಕೆ ಅಫ್ಘಾನಿಸ್ತಾನ (Afghanistan) ಮಣ್ಣುಮುಕ್ಕಿದೆ. ಇಂದು ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ (India) 127 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳನ್ನ 3-0 ಅಂತರದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಅಲ್ಲದೇ, ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಗೆದ್ದ 2ನೇ ಟಿ20 ಸರಣಿಯೂ ಇದಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್ ಪೇರಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 14.1 ಓವರ್‌ಗಳಲ್ಲೇ 94 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 108 ರನ್ (11 ಸಿಕ್ಸರ್, 9 ಬೌಂಡರಿ), ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 50 ರನ್, ಶ್ರೇಯಸ್ ಅಯ್ಯರ್ 29 ರನ್ ಗಳಿಸಿದ್ರೆ, ಇನ್ನುಳಿದವರು ಅಲ್ಪಮೊತ್ತಕ್ಕೆ ಔಟಾದರು.
ಬೃಹತ್ ಮೊತ್ತದ ಬೆನ್ನಟ್ಟಿದ ಅಫ್ಘಾನಿಸ್ತಾನ ಒಂದು ಕಡೆ ಸ್ಫೋಟಕ ಆರಂಬ ಪಡೆಯಲು ಮುಂದಾಯಿತು. ಆದ್ರೆ ಭಾರತದ ವೇಗಿಗಳ ಪರಾಕ್ರಮಕ್ಕೆ ಪವರ್‌ಪ್ಲೇನಿಂದಲೇ ವಿಕೆಟ್‌ಗಳು ಉರುಳಿದವು. ಅಂತಿಮವಾಗಿ 94 ರನ್‌ಗಳಿಗೆ ಅಫ್ಘಾನ್ ಆಲೌಟ್ ಆಯಿತು.

ಅಫ್ಘಾನ್ ವಿರುದ್ಧ ಸತತ 19ನೇ ಗೆಲುವು
ಈ ಸರಣಿ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಸತತ 19ನೇ ಗೆಲುವು ದಾಖಲಿಸಿದೆ. 11 ಟಿ20 ಪಂದ್ಯ, 6 ಏಕದಿನ ಹಾಗೂ 2 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದೆ.

