– ಕಲ್ಯಾಣದ ನಿಜ ಕಲ್ಯಾಣವೇ ನಮ್ಮ ಸರ್ಕಾರದ ಮೂಲ ಮಂತ್ರ
ಕಲಬುರಗಿ: ಬೆಂಗಳೂರು ಕರ್ನಾಟಕದ ಕಿರೀಟವಾದರೆ, ಬಸವಣ್ಣನ ಕರ್ಮಭೂಮಿ, ಸಾಮಾಜಿಕ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕ ಭಾಗವು ನಾಡಿನ ಶಕ್ತಿ ಪೀಠವಿದ್ದಂತೆ. ಕಲ್ಯಾಣದ ನಿಜ ಕಲ್ಯಾಣವೇ ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.
ಕಲಬುರಗಿ (Kalabauragi) ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಪರೇಡ್ ವೀಕ್ಷಣೆ ಮಾಡಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ಇದನ್ನೂ ಓದಿ: ಕಲಬುರಗಿ ನಗರದಲ್ಲಿ ಏಕಾಏಕಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ – ಅನಧಿಕೃತ ಅಂತ ತೆರವು ಮಾಡಿದ ಪಾಲಿಕೆ
ಸಾಮಾಜಿಕ ನ್ಯಾಯ ಸಾರಿದ ಈ ಪುಣ್ಯ ಭೂಮಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ಚಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. 2013-14ರಿಂದ 2025-26ನೇ ಸಾಲಿನವರೆಗೆ ಮಂಡಳಿಗೆ 24,780 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ 14,000 ಕೋಟಿ ರೂ.ಅನುದಾನ ಖರ್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಇದುವರೆಗೆ 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ತುಂಗಾಭದ್ರಾ, ಕೃಷ್ಣದಂತೆ ಅಭಿವೃದ್ಧಿ ಕಾರ್ಯಗಳು ಪ್ರದೇಶದಲ್ಲಿ ತುಂಬಿ ತುಳುಕುತ್ತಿವೆ ಎಂದರು.
ಕಲ್ಯಾಣ ಕರ್ನಾಟಕ ರಾಜ್ಯದ ಶಕ್ತಿಪೀಠ
ನಾವು ಮತಕ್ಕಾಗಿ ಅಲ್ಲ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಸೇವೆಯೇ ದೇವರ ಸೇವೆ. ಅದಕ್ಕಾಗಿ ಪ್ರಜಾಸೇವೆ ಇಲಾಖೆಯನ್ನೇ ಸ್ಥಾಪಿಸಿದ್ದೇವೆ. ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ಪ್ರತಿ 2ನೇ ಹಾಗೂ 4ನೇ ಶನಿವಾರ ನಾನೂ ಸೇರಿದಂತೆ ನಮ್ಮ… pic.twitter.com/EMxvqgmpfC
— DK Shivakumar (@DKShivakumar) September 17, 2026
371ಜೆ ಜಾರಿಯಾದ ನಂತರ 79,383 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಹೊಸದಾಗಿ ಭರ್ತಿ ಮಾಡುತ್ತಿರುವ 72 ಸಾವಿರ ಹುದ್ದೆಗಳಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಯುವಜನರಿಗೆ ದೊರೆಯಲಿವೆ. ಮೀಸಲಾತಿಯ ಕಾರಣದಿಂದ ವೈದ್ಯಕೀಯ ಕ್ಷೇತ್ರದಲ್ಲಿ 10,000ಕ್ಕೂ ಹೆಚ್ಚು ಹಾಗೂ ಎಂಜಿನಿಯರಿಂಗ್‌ನಲ್ಲಿ 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿದೆ. ಇಂತಹ ಮಹಾನ್ ಕಾರ್ಯ ಮಾಡಿದ ಅಂದಿನ ಯು.ಪಿ.ಎ. ಸರ್ಕಾರದ ಮುಖ್ಯಸ್ಥೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನಸಿಂಗ್ ಮತ್ತು ವಿಶೇಷವಾಗಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ಇದನ್ನು ಜಾರಿಗೆ ತರಲು ಅವಿರತ ಶ್ರಮಿಸಿದ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರನ್ನ ನೀವ್ಯಾರು ಮರೆಯುವಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಡಾಡಿ ವಾಹನಗಳಿಂದ ಈವರೆಗೆ 5.45 ಲಕ್ಷ ದಂಡ ವಸೂಲಿ
ಶಕ್ತಿ ಯೋಜನೆಯಡಿ ಮಹಿಳೆಯರು 117.6 ಕೋಟಿ ಟ್ರಿಪ್ ಉಚಿತ ಪ್ರಯಾಣ ಮಾಡಿದ್ದು, ಇದಕ್ಕಾಗಿ 4,287 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 21.42 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ 2,328 ಕೋಟಿ ರೂ. ವಿನಿಯೋಗ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 24.78 ಲಕ್ಷ ಮಹಿಳೆಯರಿಗೆ 9,650 ಕೋಟಿ ರೂ. ವಿತರಿಸಲಾಗಿದೆ. ಯುವನಿಧಿ ಯೋಜನೆಗೆ 172 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಬದಲಾಯಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರದೇಶದಲ್ಲಿ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು 350 ಕೆಪಿಎಸ್ ಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳಿಗೆ 200 ಕೋಟಿ ರೂ. ನೀಡಲಾಗಿದೆ. 7,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ-ಬೀದರ್ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಸುಧಾರಣೆಗೆ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರೂ. ವೆಚ್ಚದಲ್ಲಿ 1050 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಯುವಕರಲ್ಲಿ ನಾಯಕತ್ವ ಗುಣ ಬೆಳೆಸಬೇಕು ಮತ್ತು ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ದೃಷ್ಠಿಯಿಂದ 10 ಸಾವಿರ ಭಾರತ ಜೋಡೋ ಸಂಘ ರಚಿಸಲಾಗುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೆ ಯುವಕರ ಪ್ರತಿಭೆ ಹೊರತರಲು ಮತ್ತು ಸಂಘಟನಾತ್ಮಕವಾಗಿ ಯುವ ಶಕ್ತಿ ಬಲಿಷ್ಟಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.ಇದನ್ನೂ ಓದಿ:ರಾಜ್ಯ ಬಿಜೆಪಿ ಬಲವರ್ಧನೆಗೆ ಮಾಸ್ಟರ್ ಪ್ಲ್ಯಾನ್ ರೆಡಿ – ಉಚ್ಚಾಟಿತರು, ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರ ಮರಳಿ ಕರೆತರಲು ಚಿಂತನೆ
ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕಿದ್ವಾಯಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಅನೇಕ ಆರೋಗ್ಯ ಸಂಸ್ಥೆಗಳು ಪ್ರಗತಿಯಲ್ಲಿವೆ. ಇದಲ್ಲದೆ ಯಾದಗಿರಿ, ಕೊಪ್ಪಳ, ಬೀದರನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಆರೋಗ್ಯ ಆವಿಷ್ಕಾರದಡಿ 1,797 ಕೋಟಿ ರೂ. ಒದಗಿಸುವ ಮೂಲಕ ಕಲಬುರಗಿ ಕೇಂದ್ರಿತವಾಗಿ ಕಲ್ಯಾಣ ಕರ್ನಾಟಕವನ್ನು ಮೆಡಿಕಲ್ ಹಬ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ 120ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು ಕಂಪನಿಗಳು ಸ್ಥಾಪನೆಯಾಗುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸುವ ಕೆಲಸವಾಗುತ್ತಿದೆ. 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳ ಗುರಿ ಹೊಂದಿದೆ ಎಂದರು.ಇದನ್ನೂ ಓದಿ: ಕರಾವಳಿಯ ಪ್ರತಿ ಕ್ಷೇತ್ರಕ್ಕೆ 200 ಕೋಟಿ ಅನುದಾನ ಬಿಡುಗಡೆ ಮಾಡಿ: ವಿಜಯೇಂದ್ರ ಆಗ್ರಹ
ಕಲ್ಯಾಣ ಕರ್ನಾಟಕ ಎಕಾನಮೀ ಮಿಷನ್:
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸರ್ಕಾರವು ಸೆಕ್ಷನ್ 8 ಕಂಪನಿಯಾಗಿ ಕಲ್ಯಾಣ ಕರ್ನಾಟಕ ಎಕಾನಮೀ ಮಿಷನ್ ಸ್ಥಾಪಿಸಲಿದೆ. ಈ ಮಿಷನ್ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಈ ಪ್ರದೇಶದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ.
ಜೈವಿಕ ಆರ್ಥಿಕ ಮಿಷನ್:
ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಸರ್ಕಾರವು ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಲಿದೆ. ತೊಗರಿ ಬೇಳೆ, ಕಮಲಾಪುರ ಬಾಳೆಹಣ್ಣು, ಒಣದ್ರಾಕ್ಷಿ ಮತ್ತು ಸಿರಿಧಾನ್ಯಗಳು ಸೇರಿದಂತೆ ಈ ಪ್ರದೇಶದ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇದು ಒತ್ತು ನೀಡಲಿದೆ.ಇದನ್ನೂ ಓದಿ: ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿಗೆ ಸವಾಲ್ ಆಗಿ ಶುಕ್ರವಾರ ಟಿ. ನರಸೀಪುರದಲ್ಲಿ ಶೋಭಾಯಾತ್ರೆ
ರಕ್ತಹೀನತೆ ವಿರುದ್ಧ ವಿಶೇಷ ಅಭಿಯಾನ:
ಈ ಪ್ರದೇಶದಲ್ಲಿ ರಕ್ತಹೀನತೆಯ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರವು ಮುಂದಿನ ಎರಡು ವರ್ಷಗಳ ಕಾಲ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಅಭಿಯಾನ ಕೈಗೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರು, ಹದಿಹರೆಯದವರು ಹಾಗೂ ಹಾಲುಣಿಸುವ ತಾಯಂದಿರ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು.
ಕಲಬುರಗಿ ನಗರದ ಮೂಲಸೌಕರ್ಯ:
ವೇಗವಾಗಿ ಬೆಳೆಯುತ್ತಿರುವ ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸ ಪೆರಿಫೆರಲ್ ರಿಂಗ್ ರೋಡ್ ಕೂಡ ಯೋಜನೆಯಲ್ಲಿದ್ದು, ಅದರ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜೊತೆಗೆ 30 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ಪ್ರಮುಖ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು.ಇದನ್ನೂ ಓದಿ:ಸಿಡಿಲಬ್ಬರದ ಶತಕ, ಇತಿಹಾಸ ನಿರ್ಮಿಸಿದ ಅಭಿ – 13 ವರ್ಷ ಹಿಟ್‌ಮ್ಯಾನ್ ಹೆಸರಲ್ಲಿದ್ದ ದಾಖಲೆ ಉಡೀಸ್
ಎಐ ಆಧಾರಿತ ಸಿಸಿಟಿವಿ ಜಾಲ:
ಸಾರ್ವಜನಿಕ ಸುರಕ್ಷತೆ, ಅಪರಾಧ ತಡೆ ಮತ್ತು ಸಂಚಾರ ನಿರ್ವಹಣೆಯನ್ನು ಬಲಪಡಿಸಲು ಕಲಬುರಗಿ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಎಐ ಆಧಾರಿತ ಸಿಸಿಟಿವಿ ವ್ಯವಸ್ಥೆ ಅಳವಡಿಸಲಾಗುವುದು. ತ್ಯಾಜ್ಯ ನಿರ್ವಹಣೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ನಾಗರಿಕ ಸೇವೆಗಳ ಮೇಲ್ವಿಚಾರಣೆಯಲ್ಲಿಯೂ ಈ ಜಾಲವನ್ನು ಬಳಸಲಾಗುವುದು.
50,000 ನಿವೇಶನ ಹಂಚಿಕೆ:
ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ನಮ್ಮ ಬದ್ಧತೆಯ ಭಾಗವಾಗಿ, ಕಲಬುರಗಿ ಜಿಲ್ಲೆಯಲ್ಲಿ ನಿವೇಶನ ರಹಿತ ಬಡ ಕುಟುಂಬಗಳಿಗೆ 50,000 ವಸತಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಸರ್ಕಾರಿ ಭೂಮಿ ಗುರುತಿಸುವ ಕಾರ್ಯ ನಡೆದಿದೆ.
ಐಟಿ ಪಾರ್ಕ್ ಮತ್ತು KRIYA:
ಐಟಿ ಮತ್ತು ನಾವೀನ್ಯತಾ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕಲಬುರಗಿಯಲ್ಲಿ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ನಾವೀನ್ಯತೆ, ಸ್ಟಾರ್ಟ್ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು Kriya-Kalaburagi Research Innovation and Youth Accelerator ಅನ್ನು ಸ್ಥಾಪಿಸಲಾಗುವುದು.ಇದನ್ನೂ ಓದಿ:ಹಿಂದಿ ಬಗ್ಗೆ ನಿಮ್ಮ ಮನೋಭಾವ ಬದಲಿಸಿಕೊಳ್ಳಬೇಕು – ತಮಿಳುನಾಡಿಗೆ ಸುಪ್ರೀಂ ತರಾಟೆ
50 ಕೋಟಿ ರೂ. ವೆಚ್ಚದಲ್ಲಿ ಗಾಣಗಾಪೂರ ಅಭಿವೃದ್ಧಿ:
ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯ ಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು. ಕೆಕೆಆರ್‌ಡಿಬಿ ಅನುದಾನದ ಮೂಲಕ ಮಳಖೇಡ, ನಾಗಾವಿ, ಕಾಳಗಿ ಮತ್ತು ಸನ್ನತಿಯ ಪಾರಂಪರಿಕ ತಾಣಗಳನ್ನೂ ಪುನರಾಭಿವೃದ್ಧಿಪಡಿಸಲಾಗುತ್ತಿದೆ. ಗಾಣಗಾಪುರವನ್ನು ಮೊದಲ ಹಂತದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಬಸವಣ್ಣನವರ ತತ್ವಗಳು ಮತ್ತು ವಚನ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸಲು ಕಲಬುರಗಿಯಲ್ಲಿ ವಚನ ಮಂಟಪವನ್ನು ಸ್ಥಾಪಿಸಲಾಗುವುದು.
ಕ್ರೀಡಾ ಮೂಲಸೌಕರ್ಯ:
ಮುಂದಿನ ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣವನ್ನು ಆಧುನಿಕ ಕ್ರೀಡಾ ಮೂಲಸೌಕರ್ಯದೊಂದಿಗೆ ಸಮಗ್ರವಾಗಿ ಪುನರಾಭಿವೃದ್ಧಿಪಡಿಸಲಾಗುವುದು. ಇಡೀ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನುಕೂಲವಾಗುವಂತೆ ಕ್ರಿಕೆಟ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಕೆಎಸ್‌ಸಿಎ ಜೊತೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಲಬುರಗಿ ತಾಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ “Sports City” ಸ್ಥಾಪಿಸಲಾಗುವುದು. ವಿವಿಧ ಕ್ರೀಡೆಗಳಿಗೆ ಅಂತಾರಾಷ್ತ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ಕೋಟಿ ವೃಕ್ಷ ಅಭಿಯಾನ:
ಕಲ್ಯಾಣ ಭಾಗದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಮುಂದಿನ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು. ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವುದು ಇದರ ಗುರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುಪಿಐ ಪಾವತಿಗಳ ಮೇಲೆ ಬೀಳುತ್ತಾ ಜಿಎಸ್‌ಟಿ? ವದಂತಿಗೆ ಕೇಂದ್ರ ಸ್ಪಷ್ಟನೆ

