– ಪಾಲಿಕೆ ನಡೆಗೆ ಕೆರಳಿ ಕೆಂಡವಾದ ಸಿದ್ದು ಅಭಿಮಾನಿಗಳು
ಕಲಬುರಗಿ: ದೇವರಾಜ ಅರಸು ನಂತರ ಅತೀ ಹೆಚ್ಚು ಕಾಲ ಸಿಎಂ ಹುದ್ದೆ ಅಲಂಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ತಮ್ಮದೆ ಆದ ಬೆಂಬಲಿಗರ ಪಡೆಯಿದೆ. ಹೀಗಾಗಿಯೇ ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ನಗರದ ಒಂದು ವೃತದಲ್ಲಿ ರಾತೋ ರಾತ್ರಿ ಅವರ ಪ್ರತಿಮೆ ಸ್ಥಾಪಿಸಿದ್ದರು. ಆದ್ರೆ ಅನುಮತಿ ಇಲ್ಲದೇ ಪ್ರತಿಮೆ ತಂದಿಟ್ಟ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಅದನ್ನ ತೆರವು ಮಾಡಿದ್ದಾರೆ. ಇದು ಸಿದ್ದರಾಮಯ್ಯ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ರಾಜ್ಯದಲ್ಲಿ ಅಹಿಂದ ನಾಯಕ ಅಂತಾನೆ ಖ್ಯಾತಿ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಲಕ್ಷಾಂತರ ಜನ ಬೆಂಬಲಿಗರಿದ್ದಾರೆ. ಹೀಗಾಗಿಯೇ 2013 ಹಾಗೂ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದು ಪಾತ್ರ ಅತ್ಯಂತ ಮಹತ್ವದಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನ ಬಿಟ್ಟುಕೊಟ್ಟರು.

ಇನ್ನೂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಆದ್ರೂ ಕೂಡ ಹಳೇ ಮೈಸೂರು ಭಾಗ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಬೆಂಬಲಿಗರನ್ನ ಹೊಂದಿದ್ದಾರೆ. ಹೀಗಾಗಿಯೇ ಕಲಬುರಗಿಯ ಬಿದ್ದಾಪುರ್ ಕ್ರಾಸ್‌ಗೆ ಸಿದ್ದರಾಮಯ್ಯ ವೃತ ಅಂತಾ ಹೆಸರಿಡಬೇಕೆಂದು ಅವರ ಬೆಂಬಲಿಗರು ಕಳೆದ ಮೂರು-ನಾಲ್ಕು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಇತ್ತೀಚೆಗೆ ಆ ಸರ್ಕಲ್‌ನಲ್ಲಿ ಸಿದ್ದರಾಮಯ್ಯ ವೃತ ಅಂತಾ ನಾಮಫಲಕದ ಸಹ ಹಾಕಲಾಗಿತ್ತು. ಅದಾದ ಬಳಿಕ ನಿನ್ನೆ ಕಲಬುರಗಿಗೆ ಸಿಎಂ ಡಿಕೆ ಶಿವಕುಮಾರ್ ಪ್ರವಾಸದಲ್ಲಿರುವಾಗಲೇ ಅವರ ಬೆಂಬಲಿಗರು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆ ತಂದಿಟ್ಟಿದ್ದಾರೆ.
ಅದಾದ ಬಳಿಕ ಬೆಳಗ್ಗೆ ಸಮಯದಲ್ಲಿ ಇದು ಕೆಲ ಕಾಲ ಗೊಂದಲಕ್ಕೆ ಕಾರಣಯಿತು. ಈ ಹಿನ್ನೆಲೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು, ಅನುಮತಿ ಪಡೆಯದೇ ಸರ್ಕಲ್‌ನಲ್ಲಿ ಅನಧಿಕೃತವಾಗಿ ಪ್ರತಿಮೆ ಇಡಲಾಗಿದೆ ಎಂದು ತೆರವು ಮಾಡಿದ್ದಾರೆ.

ಈ ಗೊಂದಲಕ್ಕೆ ಪ್ರಮುಖ ಕಾರಣವೆಂದ್ರೆ ಈ ಬಿದ್ದಾಪೂರ್ ವೃತವನ್ನ ಕೊಲಿ ಸಮುದಾಯದ ಮುಖಂಡ ದಿವಗಂತ ವಿಠ್ಠಲ್ ಹೇರೂರ್ ವೃತ ಮಾಡಬೇಕು ಅಂತಾ ಒಂದೆಡೆ ಹೋರಾಟ ನಡೆಯುತ್ತಿದೆ. ಹೀಗಾಗಿಯೇ ಈ ವೃತದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ವಿಠ್ಠಲ್ ಹೇರೂರ್ ವೃತ ಅಂತಾ ಆ ಸಮುದಾಯದ ಜನ ಬೋರ್ಡ್ ಸಹ ಹಾಕಿದ್ದಾರೆ. ಇನ್ನು ಆ ಬೋರ್ಡ್ ಪಕ್ಕದಲ್ಲಿಯೇ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ವೃತ ಅಂತಾ ಕೆಲ ವರ್ಷಗಳ ಹಿಂದೆ ನಾಮಫಲಕ ಹಾಕಿದ್ದಾರೆ. ಹೀಗಾಗಿ ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಯಾರಿಗೂ ಸಹ ಪ್ರತಿಮೆ ಸ್ಥಾಪನೆಗೆ ಇಲ್ಲಿಯವರೆಗೆ ಅವಕಾಶ ನೀಡಿಲ್ಲ. ಆದರೆ ಶತಾಯಗತಾಯ ಆ ವೃತ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಲ್ ಆಗಬೇಕು ಅಂತಾ ಅವರ ಬೆಂಬಲಿಗರು ಮಧ್ಯರಾತ್ರಿ ಪ್ರತಿಮೆ ತಂದಿಟ್ಟಿದ್ದಾರೆ. ಆದರೆ ಸಮಸ್ಯೆಯನ್ನ ಸೂಕ್ಷ್ಮವಾಗಿ ತಿಳಿದ ಪಾಲಿಕೆ ಪ್ರತಿಮೆ ಇಟ್ಟ ಕೆಲವೇ ಗಂಟೆಗಳಲ್ಲಿ ತೆರವು ಮಾಡಿದ್ದಾರೆ. ಪಾಲಿಕೆಯ ಈ ಕ್ರಮದಿಂದ ಇದೀಗ ಟಗರು ಅಭಿಮಾನಿಗಳು ಕರಳಿದ್ದಾರೆ. ಪ್ರತಿಮೆ ಸ್ಥಾಪಿಸಿ, ಇಲ್ಲದಿದ್ರೆ ಅಹಿಂದ ಹೋರಾಟ ಎದುರಿಸಿ ಅಂತಾ ಎಚ್ಚರಿಕೆ ನೀಡಿದ್ದಾರೆ.

