ನವದೆಹಲಿ: ವ್ಯಾಪಾರಿಗಳು 2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ವ್ಯಾಪಾರ ರಿಯಾಯಿತಿ ದರ (MDR) ಶುಲ್ಕದ ಮೇಲೆ ಶೇಕಡಾ18 ರಷ್ಟು ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲಾಗುತ್ತದೆ ಎಂಬ ವದಂತಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಎಮ್‌ಡಿಆರ್ ವದಂತಿಗಳ ಕುರಿತು ಕೇಂದ್ರ ಸ್ಪಷ್ಟನೆ ನೀಡಿದ್ದು, UPI ಮೇಲೆ ಯಾವುದೇ ರೀತಿಯ GST ವಿಧಿಸಲಾಗುವುದಿಲ್ಲ. ಬದಲಾಗಿ ಇದನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(ITC)ನಲ್ಲಿ ಹೊಂದಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇನ್ನು ಈ ಬದಲಾವಣೆಯಿಂದ ವ್ಯಾಪಾರಿಗಳಿಗೆ ನಗದು ವಹಿವಾಟು ಹೆಚ್ಚಾಗುತ್ತದೆ ಎಂಬ ಯಾವುದೇ ಆತಂಕ ಬೇಡ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಹೊಸ ನಿಯಮದನ್ವಯ 2,000 ರೂ.ಗಿಂತ ಹೆಚ್ಚಿನ ವ್ಯಾಪಾರಿಗಳಿಗೆ (P2M) ಮಾಡಲಾದ UPI ಪಾವತಿಗಳು ಅಕ್ಟೋಬರ್ 15 ರಿಂದ ಶೇಕಡಾ 0.4 ರಷ್ಟು MDR ಅನ್ನು ಆಕರ್ಷಿಸುತ್ತವೆ , ಇದು ಪ್ರತಿ ವಹಿವಾಟಿಗೆ ಒಟ್ಟಾರೆ ಮಿತಿ ರೂ. 300 ಕ್ಕೆ ಒಳಪಟ್ಟಿರುತ್ತದೆ.
ರೈಲ್ವೆ, ದೂರಸಂಪರ್ಕ ಸೇವೆಗಳು, ವಿಮೆ ಮತ್ತು ಇಂಧನ ಸೇರಿದಂತೆ ಕೆಲವು ವ್ಯಾಪಾರಿ ವರ್ಗಗಳಿಗೆ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ 5 ರೂ.ಗಳ ಸ್ಥಿರ ರಿಯಾಯಿತಿ ಎಂಡಿಆರ್ ಅನ್ವಯಿಸುತ್ತದೆ. ಇದನ್ನೂ ಓದಿ: ಇನ್ಮುಂದೆ ಯುಪಿಐ ಉಚಿತವಲ್ಲ – ಗ್ರಾಹಕರ ಮೇಲೆ ಏನು ಪರಿಣಾಮ? ಶುಲ್ಕ ವಿಧಿಸಿದ್ದು ಯಾಕೆ? ಯಾರಿಗೆ ಲಾಭ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಯಾವುದಕ್ಕೆ ಎಷ್ಟು ಪಾವತಿ ದರ?
ಭಾರತದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತಂದಿರುವ ಹೊಸ ಯುಪಿಐ (UPI) ಎಂಡಿಆರ್ ನಿಯಮಗಳು ಅಕ್ಟೋಬರ್ 15 ರಿಂದ ಜಾರಿಗೆ ಬರಲಿವೆ. ಇದರ ಪ್ರಕಾರ ವಿವಿಧ ಪಾವತಿ ವಿಧಾನಗಳ ದರಗಳು ಈ ಕೆಳಗಿನಂತಿವೆ
• 2,000 ರೂ. ವರೆಗಿನ ವಹಿವಾಟು: ಯಾವುದೇ ಶುಲ್ಕವಿಲ್ಲ
• 2,000 ರೂ. ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳು (P2M): 0.4% MDR ಅನ್ವಯ
• ಗರಿಷ್ಠ ಮಿತಿ 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಗರಿಷ್ಠ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಲಾಗಿದೆ.
• ಅತ್ಯಗತ್ಯ ಸೇವೆಗಳಿಗೆ ಸ್ಥಿರ ದರ: ರೈಲ್ವೆ, ಟೆಲಿಕಾಂ, ವಿಮೆ, ಇಂಧನ, ಮತ್ತು ಕೃಷಿ ಪರಿಕರಗಳ ಖರೀದಿಗೆ 2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ 0.4% ಬದಲಾಗಿ 5 ರೂ.ಸ್ಥಿರ ಶುಲ್ಕ ಇರುತ್ತದೆ.
• ಬಂಡವಾಳ ಮಾರುಕಟ್ಟೆ ಪಾವತಿಗಳು: ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕರ್ ಮತ್ತು ಸೆಕ್ಯುರಿಟೀಸ್ ಪಾವತಿಗಳಿಗೆ 0.02% MDR ಗರಿಷ್ಠ 300 ರೂ.
ಯಾರಿಗೆ ಉಚಿತ?
ಗ್ರಾಹಕರಿಗೆ ಉಚಿತ: ಈ ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಸಾಮಾನ್ಯ ಗ್ರಾಹಕರು ಹಣ ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ಕಡಿತವಾಗುವುದಿಲ್ಲ.
ವ್ಯಕ್ತಿಗತ ವರ್ಗಾವಣೆ ಉಚಿತ: ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಯುಪಿಐ ಮೂಲಕ ಎಷ್ಟು ಹಣ ಕಳುಹಿಸಿದರೂ ಅದು ಸಂಪೂರ್ಣ ಉಚಿತವಾಗಿರುತ್ತದೆ.
ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶುಲ್ಕ – ಗ್ರಾಹಕರಿಗೆ ಹೊರೆ ಬೀಳದಂತೆ ಕೇಂದ್ರ ಸರ್ಕಾರ ನಿಗಾ

