ಶಾರ್ಜಾ: ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಆಧುನಿಕ ಸಾರಿಗೆ ತಂತ್ರಜ್ಞಾನಗಳ ಬಳಕೆಯ ಸಾಧ್ಯತೆಯನ್ನು ಪರಿಶೀಲಿಸುವ ಉದ್ದೇಶದಿಂದ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (K.J. George) ನೇತೃತ್ವದ ಕರ್ನಾಟಕ ಪ್ರವಾಸೋದ್ಯಮ ನಿಯೋಗವು ಶಾರ್ಜಾದಲ್ಲಿ (Sharjah) ಕಾರ್ಯನಿರ್ವಹಿಸುತ್ತಿರುವ ಸ್ಟ್ರಿಂಗ್ ಟ್ರಾನ್ಸ್ಪೋರ್ಟ್ (ಎಲೆವೇಟೆಡ್ ಪಾಡ್ ಸಾರಿಗೆ) (String Transport) ವ್ಯವಸ್ಥೆಯನ್ನು ಪರಿಶೀಲಿಸಿತು.
ನಿಯೋಗವು ವ್ಯವಸ್ಥೆಯ ತಾಂತ್ರಿಕ ವಿನ್ಯಾಸ, ಕಾರ್ಯಾಚರಣಾ ವಿಧಾನ, ಪ್ರಯಾಣಿಕರ ಸಾಗಣೆ ಸಾಮರ್ಥ್ಯ, ಸುರಕ್ಷತಾ ಅಂಶಗಳು ಹಾಗೂ ಕಡಿಮೆ ಭೂಬಳಕೆಯೊಂದಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಗಳ ಕುರಿತು ಮಾಹಿತಿ ಪಡೆದುಕೊಂಡಿತು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ದಾಳಿ ಎಚ್ಚರಿಕೆ- ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ
ಸಾಂಪ್ರದಾಯಿಕ ರಸ್ತೆ ಅಥವಾ ರೈಲು ಮೂಲಸೌಕರ್ಯಕ್ಕೆ ಹೋಲಿಸಿದರೆ, ಈ ಮಾದರಿಯ ಸಾರಿಗೆ ವ್ಯವಸ್ಥೆ ನೆಲಮಟ್ಟದಲ್ಲಿ ಕಡಿಮೆ ಜಾಗವನ್ನು ಬಳಸಿಕೊಂಡು ಎತ್ತರದ ಮಾರ್ಗದ ಮೂಲಕ ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆಯಾಗಿದೆ. ಪ್ರತ್ಯೇಕ ಪಾಡ್ಗಳ ಮೂಲಕ ಸಂಚಾರ ನಡೆಸುವ ಈ ತಂತ್ರಜ್ಞಾನವನ್ನು ಪ್ರವಾಸಿ ತಾಣಗಳ ಒಳಾಂಗಣ ಸಂಪರ್ಕ, ಕೊನೆಯ ಹಂತದ ಸಂಪರ್ಕ ಹಾಗೂ ಸ್ಥಳಾವಕಾಶ ಸೀಮಿತ ಪ್ರದೇಶಗಳಲ್ಲಿ ಬಳಸುವ ಸಾಧ್ಯತೆಗಳ ಕುರಿತು ನಿಯೋಗ ಅಧ್ಯಯನ ನಡೆಸಿತು.
ಹಂಪಿಯಂತಹ ವಿಶಾಲ ಪ್ರವಾಸಿ ವಲಯಗಳು, ಬೆಟ್ಟ ಪ್ರದೇಶಗಳು, ನಗರಗಳಿಗೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳು ಹಾಗೂ ಭೂಸ್ವಾಧೀನಕ್ಕೆ ಅವಕಾಶ ಕಡಿಮೆ ಇರುವ ಪ್ರದೇಶಗಳಲ್ಲಿ ಇಂತಹ ಎಲೆವೇಟೆಡ್ ಸಾರಿಗೆ ವ್ಯವಸ್ಥೆಗಳ ಉಪಯುಕ್ತತೆ ಕುರಿತು ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಬಹುದಾಗಿದೆ.

ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಕೇವಲ ತಾಣಗಳ ಅಭಿವೃದ್ಧಿಯಲ್ಲ. ಪ್ರವಾಸಿಗರು ತಾಣವನ್ನು ಸುಲಭವಾಗಿ ತಲುಪುವುದು ಮತ್ತು ತಾಣದೊಳಗೆ ಸುಗಮವಾಗಿ ಸಂಚರಿಸುವುದೂ ಅಷ್ಟೇ ಮುಖ್ಯ. ಜಗತ್ತಿನ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿರುವ ಹೊಸ ಸಾರಿಗೆ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿ, ಕರ್ನಾಟಕದ ಅಗತ್ಯಗಳಿಗೆ ಯಾವ ಮಾದರಿ ಸೂಕ್ತ ಎಂಬುದನ್ನು ಪರಿಶೀಲಿಸುವುದು ನಮ್ಮ ಉದ್ದೇಶವಾಗಿದೆ. ಶಾರ್ಜಾದಲ್ಲಿ ನೋಡಿದ ಈ ವ್ಯವಸ್ಥೆಯ ತಾಂತ್ರಿಕ, ಆರ್ಥಿಕ, ಸುರಕ್ಷತಾ ಹಾಗೂ ಕಾರ್ಯಾಚರಣಾ ಸಾಧ್ಯತೆಗಳನ್ನು ಅಧ್ಯಯನ ಮಾಡಿ, ರಾಜ್ಯದ ಆಯ್ದ ಪ್ರದೇಶಗಳಲ್ಲಿ ಇದರ ಬಳಕೆಗೆ ಇರುವ ಅವಕಾಶಗಳನ್ನು ಪರಿಶೀಲಿಸಲಾಗುವುದು,” ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಮಾತನಾಡಿ, “ಕಡಿಮೆ ಭೂಬಳಕೆಯೊಂದಿಗೆ ಸಂಪರ್ಕ ಒದಗಿಸುವ ಇಂತಹ ತಂತ್ರಜ್ಞಾನಗಳು ರಾಜ್ಯದ ಕೆಲವು ಆಯ್ದ ಪ್ರವಾಸಿ ತಾಣಗಳಲ್ಲಿ ಉಪಯುಕ್ತವಾಗಬಹುದಾದ ಸಾಧ್ಯತೆ ಇದೆ. ಮಾನ್ಯ ಪ್ರವಾಸೋದ್ಯಮ ಸಚಿವರ ನಿರ್ದೇಶನದ ಮೇರೆಗೆ ಸ್ಥಳೀಯ ಭೌಗೋಳಿಕ ಪರಿಸ್ಥಿತಿ, ಪ್ರಯಾಣಿಕರ ಪ್ರಮಾಣ, ವೆಚ್ಚ, ನಿರ್ವಹಣೆ ಮತ್ತು ಸುರಕ್ಷತೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ಸಾಧ್ಯತಾ ಅಧ್ಯಯನ ನಡೆಸಿ, ಅನುಕೂಲಕರ ಸ್ಥಳಗಳನ್ನು ಗುರುತಿಸುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಎಸ್ಟಿಡಿಸಿ ಅಧ್ಯಕ್ಷ ಶ್ರೀನಿವಾಸ್ ಎಂ., ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಪ್ರವಾಸೋದ್ಯಮ ಇಲಾಖೆ ಆಯುಕ್ತ ಹಾಗೂ ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್., ಮತ್ತು ಪ್ರವಾಸೋದ್ಯಮ ಸಚಿವರ ಸಲಹೆಗಾರ ಡಾ. ಸಂತೃಪ್ತ್ ಹೆಚ್.ವಿ. ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಶೇ.100 ಸುಂಕ ವಿಧಿಸುವ ಮಸೂದೆಗೆ ಒಪ್ಪಿಗೆ

