– ಧನಂಜಯ್ ಹೇಳಿಕೆಯನ್ನು ಸಮರ್ಥಿಸುತ್ತಿರುವ ಕಾಂಗ್ರೆಸ್
– ಕೋಮು ವೈಷಮ್ಯ ಸೃಷ್ಟಿಸಲು ಯತ್ನ ಆರೋಪ
ಮೈಸೂರು: ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಹೇಳಿದ ಹೇಳಿಕೆಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥಿಸುತ್ತಿದ್ದಂತೆ ಇನ್ನೊಂದು ಕಡೆ ಹೇಳಿಕೆಯನ್ನುತಿರುಚಿದ ಆರೋಪದ ಮೇಲೆ ಸ್ಥಳೀಯ ಖಾಸಗಿ ವಾಹಿನಿಯ ಎಡಿಟರ್ ಮಂಜುನಾಥ್ ವಿರುದ್ಧ ಟಿ.ನರಸೀಪುರ(T Narasipura) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಪೊಲೀಸ್ ನಿರೀಕ್ಷಕರು ನೀಡಿದ ಎಚ್ಚರಿಕೆಯ ವಿಡಿಯೋವನ್ನು ತಿರುಚಿ ಸಾರ್ವಜನಿಕರಲ್ಲಿ ಭೀತಿ ಮತ್ತು ಕೋಮು ವೈಷಮ್ಯ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಟಿ. ನರಸೀಪುರ ಕಾನ್ಸ್ಟೇಬಲ್ ಯಶವಂತ್ ಅವರು ದೂರು ನೀಡಿದ್ದಾರೆ. ಇದನ್ನೂ ಓದಿ: ಇನ್ಸ್ಪೆಕ್ಟರ್ ಧನಂಜಯ್ ದರ್ಪದ ಹಳೆಯ ಕರಾಳ ಮುಖಗಳು ಮತ್ತೆ ವೈರಲ್: ವಿಚಾರಣೆ ನೆಪದಲ್ಲಿ ಬ್ಯಾಟ್ನಿಂದ ಹಲ್ಲೆ

ಈ ದೂರಿನ ಅನ್ವಯ ಬಿಎನ್ಎಸ್ ಸೆಕ್ಷನ್ 353(1)(b)(ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ (ಡಿಜಿಟಲ್ ವಿಧಾನಗಳು) ಸಾರ್ವಜನಿಕರಲ್ಲಿ ಕಿಡಿಗೇಡಿತನ, ಭಯ ಅಥವಾ ಆತಂಕವನ್ನುಂಟುಮಾಡುವ ಸುಳ್ಳು ಮಾಹಿತಿ, ವದಂತಿ ಅಥವಾ ವರದಿಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು), 353(1)(c) (ಯಾವುದೇ ಧರ್ಮ, ಜಾತಿ, ಭಾಷೆ ಅಥವಾ ಸಮುದಾಯಗಳ ನಡುವೆ ದ್ವೇಷ, ಅಸಹ್ಯ ಅಥವಾ ವೈಮನಸ್ಸನ್ನು ಉತ್ತೇಜಿಸುವ ಉದ್ದೇಶದಿಂದ ಹೇಳಿಕೆಗಳನ್ನು ನೀಡುವುದು ಅಥವಾ ಪ್ರಕಟಿಸುವುದು) ಅಡಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಹೇಳಿದಂತೆ ಕೇಳಲು ಆಗುತ್ತಾ? ಶಿಸ್ತುಕ್ರಮದ ತೀರ್ಮಾನ ಮಾಡೋದು ಎಸ್ಪಿ ಅಲ್ಲ, ನಾನು: ಪ್ರಿಯಾಂಕ್ ಖರ್ಗೆ
ದೂರಿನಲ್ಲಿ ಏನಿದೆ?
ಸಭೆಯಲ್ಲಿ ಮಾಧ್ಯಮದವರು ಸಂಪೂರ್ಣ ಭಾಷಣವನ್ನು ಚಿತ್ರೀಕರಿಸಿಕೊಂಡಿದ್ದರು. ಆದರೆ ಟಿ.ನರಸೀಪುರದ ಸ್ಥಳೀಯ ವಾಹಿನಿ ಎಡಿಟರ್ ಮಂಜುನಾಥ್ ಇಡೀ ಭಾಷಣವನ್ನು ಪ್ರಸಾರ ಮಾಡದೇ, ಕೇವಲ 9-10 ನಿಮಿಷಗಳ ಕೊನೆಯ ಭಾಗವನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿದ್ದಾರೆ. “ಮಸೀದಿ ರಸ್ತೆಯಲ್ಲಿ ಹೋದರೆ ನಿಮ್ಮ ಗ್ರಹಚಾರ ಬಿಡಿಸುತ್ತೇನೆ” ಎಂಬಂತೆ ಬಿಂಬಿಸುವ ಕೆಲವೇ ನಿಮಿಷಗಳ ತುಣುಕನ್ನು ಇನ್ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿದ್ದರು.
ತಿರುಚಲಾದ ಈ ವಿಡಿಯೋವನ್ನು ನೈಜವೆಂದು ಭಾವಿಸಿದ ಸಾರ್ವಜನಿಕರು ಹಾಗೂ ಇತರರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಡೌನ್ಲೋಡ್ ಮಾಡಿ ಹಂಚಿಕೊಂಡ ಪರಿಣಾಮ ವಿಡಿಯೋ ವೈರಲ್ ಆಗಿತ್ತು. ಇದು ಗುಂಪುಗಳ ನಡುವೆ ದ್ವೇಷ ಉಂಟುಮಾಡುವ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹಾಗೂ ಮುಂಬರುವ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಉದ್ದೇಶ ಹೊಂದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಕಳೆದ ಸೆಪ್ಟೆಂಬರ್ 7ರಂದು ಗೌರಿ-ಗಣೇಶ ಹಬ್ಬದ ಅಂಗವಾಗಿ ಎಲ್ಲಾ ಸಮುದಾಯದ ಮುಖಂಡರ ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಠಾಣಾ ನಿರೀಕ್ಷಕರಾದ ಧನಂಜಯ್ ಅವರು ಹಿಂದಿನ ವರ್ಷಗಳಲ್ಲಿ ಅನುಮತಿ ಇಲ್ಲದೆ ಗಣಪತಿ ಪ್ರತಿಷ್ಠಾಪಿಸಿ, ಮಸೀದಿ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಡ್ಯಾನ್ಸ್ ಮಾಡಿ, ಪ್ರಚೋದನಕಾರಿ ಘೋಷಣೆ ಕೂಗಿ ಗಲಭೆಗೆ ಪ್ರಚೋದನೆ ನೀಡಿದ್ದ ಕೆಲ ಯುವಕರ ಕೃತ್ಯಗಳನ್ನು ಉಲ್ಲೇಖಿಸಿ ನಿಯಮ ಪಾಲನೆ ಕುರಿತು ಸುಮಾರು ಒಂದು ಗಂಟೆ ಕಾಲ ಎಚ್ಚರಿಕೆ ನೀಡಿದ್ದರು.

