ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಮೂಲಕ ನಡೆಯುವ ನಿರ್ದಿಷ್ಟ ವಹಿವಾಟುಗಳಿಗೆ ಶುಲ್ಕ ವಿಧಿಸುವಂತೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದಾಗ ಕಾಂಗ್ರೆಸ್ ಸಂಸದರು (Congress MP’s) ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಮಾಜಿ ಸಚಿವರಾದ ಪಿ. ಚಿದಂಬರಂ(Chidambaram P) ಮತ್ತು ಮನೀಶ್ ತಿವಾರಿ(Manish Tewari) ಸೇರಿದಂತೆ ಐವರು ಕಾಂಗ್ರೆಸ್ ಸಂಸದರು ಹಣಕಾಸು ಸ್ಥಾಯಿ ಸಮಿತಿಯಲ್ಲಿದ್ದು, ಯುಪಿಐ ವಹಿವಾಟುಗಳಿಗೆ ಹಂತ-ಹಂತದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಚೌಕಟ್ಟನ್ನು ಅಳವಡಿಸಲು ಒಲವು ವ್ಯಕ್ತಪಡಿಸಿದ್ದರು.
ಅಕ್ಟೋಬರ್ 15 ರಿಂದ 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರಿಗಳ ಮೇಲೆ ಶೇ.0.04 ರಷ್ಟು ವಿಧಿಸಲು ಉದ್ದೇಶಿಸಿರುವ ನೂತನ ಶುಲ್ಕವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಒತ್ತಾಯಿಸಿದ್ದಾರೆ.
ಆದರೆ ಆಗಸ್ಟ್ನಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಚಿದಂಬರಂ, ಮನೀಶ್ ತಿವಾರಿ, ಗೌರವ್ ಗೊಗೊಯ್, ಕಿಶೋರಿ ಲಾಲ್ ಮತ್ತು ಕೆ. ಗೋಪಿನಾಥ್ ಭಾಗವಹಿಸಿದ್ದು, ಈ ವರದಿಯನ್ನು ಅಂಗೀಕರಿಸುವಾಗ ಇವರು ಯಾರು ತಮ್ಮ ಭಿನ್ನಾಭಿಪ್ರಾಯ ದಾಖಲಿಸಿರಲಿಲ್ಲ ಎಂದು ಸಮಿತಿಯ ನಡಾವಳಿಗಳಿಂದ ತಿಳಿದುಬಂದಿದೆ.
ಬುಧವಾರ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡ ರಾಹುಲ್ ಗಾಂಧಿ(Rahul Gandhi), ಅಮೆರಿಕದ ಒತ್ತಡಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ(Narendra Modi) ಈ ಶುಲ್ಕ ವಿಧಿಸಿದ್ದಾರೆ ಎಂದು ಆರೋಪಿಸಿದ್ದರು.
Modi ji, roll back the UPI tax. Now. pic.twitter.com/IIt46zMgCG
— Rahul Gandhi (@RahulGandhi) September 16, 2026
ಈ ಆರೋಪವನ್ನು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ. ಶುಲ್ಕ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿರುವ ಕೇಂದ್ರ ಸರ್ಕಾರ, ಎಂಡಿಆರ್ ಯಾವುದೇ ತೆರಿಗೆಯಲ್ಲ ಅಥವಾ ಸರ್ಕಾರವಾಗಲಿ, ಎನ್ಪಿಸಿಐ (NPCI) ಆಗಲಿ ಸಂಗ್ರಹಿಸುವ ಶುಲ್ಕವಲ್ಲ. ಬದಲಾಗಿ ಇದು ಬ್ಯಾಂಕ್ಗಳು ಮತ್ತು ಪಾವತಿ ಆ್ಯಪ್ ಸೇವಾದಾರರು ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿರುವ ಪಾಲುದಾರರ ನಡುವೆ ಹಂಚಿಕೆಯಾಗುವ ಹಣ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇನ್ಮುಂದೆ ಯುಪಿಐ ಉಚಿತವಲ್ಲ – ಗ್ರಾಹಕರ ಮೇಲೆ ಏನು ಪರಿಣಾಮ? ಶುಲ್ಕ ವಿಧಿಸಿದ್ದು ಯಾಕೆ? ಯಾರಿಗೆ ಲಾಭ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಬಿಜೆಪಿಯ ಭರ್ತೃಹರಿ ಮಹತಾಬ್ ನೇತೃತ್ವದ ಸಂಸದೀಯ ಸಮಿತಿಯು ತನ್ನ 44ನೇ ವರದಿಯಲ್ಲಿ ಹಂತ-ಹಂತದ ಎಂಡಿಆರ್ ವ್ಯವಸ್ಥೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಯುಪಿಐ ಮತ್ತು ರುಪೇ ವಹಿವಾಟುಗಳಿಗೆ ಇದನ್ನು ಶೀಘ್ರವಾಗಿ ಜಾರಿಗೆ ತರದಿದ್ದರೆ, ಪಾವತಿ ಸೇವಾ ಪೂರೈಕೆದಾರರು ಸರ್ಕಾರದ ಅಸಮರ್ಪಕ ಅನುದಾನದ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಇದರಿಂದ ಸೈಬರ್ ಭದ್ರತೆ, ವಂಚನೆ ತಡೆ ಮತ್ತು ನೆಟ್ವರ್ಕ್ ಮೂಲಸೌಕರ್ಯಗಳ ಮೇಲಿನ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸಮಿತಿ ಎಚ್ಚರಿಸಿದೆ. ಉದ್ಯಮದ ನಿರ್ವಹಣಾ ವೆಚ್ಚಕ್ಕೆ ಅಂದಾಜು 20,700 ಕೋಟಿ ರೂ. ಅಗತ್ಯವಿದ್ದು ಬಜೆಟ್ನಲ್ಲಿ ಕೇವಲ 2,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಮಿತಿ ಉಲ್ಲೇಖಿಸಿದೆ.
ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಿ, ದೊಡ್ಡ ಸಂಸ್ಥೆಗಳು ಮತ್ತು ಮಳಿಗೆಗಳಿಗೆ ಮಾತ್ರ ಶುಲ್ಕ ವಿಧಿಸುವ ಹಂತ-ಹಂತದ ಮಾದರಿಯನ್ನು ಪರಿಗಣಿಸುವಂತೆ ಸಮಿತಿಯು ಹಣಕಾಸು ಸೇವೆಗಳ ಇಲಾಖೆಗೆ ಈ ಹಿಂದೆಯೇ ಸೂಚಿಸಿತ್ತು.
ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ಪಾವತಿಗಳ ಮೇಲೆ ಎಂಡಿಆರ್ ವಿಧಿಸಲು ಇದ್ದ ಕಾನೂನು ಅಡೆತಡೆಯನ್ನು ನಿವಾರಿಸುವ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ನೀಡಿದ ಎರಡು ದಿನಗಳ ನಂತರ, ಆಗಸ್ಟ್ 12 ರಂದು ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

