– ಮರು ಪಾವತಿಗೆ ಈ ವರ್ಷ ಹೆಚ್ಚುವರಿ ಕಾಲಾವಕಾಶ
ಬೆಂಗಳೂರು: ರಾಜ್ಯದ ಬರಪೀಡಿತ ತಾಲೂಕುಗಳ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬರಪೀಡಿತ ತಾಲೂಕುಗಳ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ವಿಶೇಷ ಪರಿಹಾರ ಯೋಜನೆ ಪ್ರಕಟಿಸಲಾಗಿದೆ. ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ ನೀಡುವುದರ ಜೊತೆಗೆ, ಒಟ್ಟು ಸಾಲ ಮರುಪಾವತಿಯ ಅವಧಿಯನ್ನೂ ಕೂಡ ವಿಸ್ತರಣೆ ಮಾಡಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿದಂತೆ ಇತರ ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ಕಾಲಾವಕಾಶ ನೀಡಿ ಆದೇಶ ನೀಡಲಾಗಿದೆ. ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿ 36 ತಿಂಗಳಿಗೆ (3 ವರ್ಷ) ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ (5 ವರ್ಷ) ವಿಸ್ತರಿಸಲಾಗಿದೆ. ರೈತರಿಂದ ಬರುವ ದೂರುಗಳಿಗೆ ತಕ್ಷಣವೇ ಜಿಲ್ಲಾಡಳಿಡ ಸ್ಪಂದಿಸಬೇಕೆಂದು ಸೂಚಿಸಲಾಗಿದೆ.

