ಬೆಂಗಳೂರು: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮಾರ್ಪಡಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಕರ್ನಾಟಕ ಮನವಿ ಮಾಡಿದೆ.
6,000 ಕ್ಯೂಸೆಕ್ ಬದಲು 3,000 ಕ್ಯೂಸೆಕ್ಗೆ ಇಳಿಸುವಂತೆ ಕರ್ನಾಟಕ ಮನವಿ ಸಲ್ಲಿಸಿದೆ. ಸೆ.15ರ ವೇಳೆಗೆ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 55.389 ಟಿಎಂಸಿ ಲೈವ್ ಸ್ಟೋರೇಜ್ ಮಾತ್ರ ಇದೆ. ಇದು ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯದ 52.97% ಮಾತ್ರ. ಜೂನ್ 1ರಿಂದ ಸೆ.15ರವರೆಗೆ ನಾಲ್ಕು ಜಲಾಶಯಗಳಿಗೆ ಬಂದಿರುವ ಒಟ್ಟು ಒಳಹರಿವು ಸುಮಾರು 111 ಟಿಎಂಸಿ. ಇದೇ ಅವಧಿಯ 30 ವರ್ಷಗಳ ಸರಾಸರಿ ಒಳಹರಿವು 228.108 ಟಿಎಂಸಿ ಆಗಿದ್ದು, 51%ಕ್ಕೂ ಅಧಿಕ ಕೊರತೆ ಇದೆ ಎಂದು ರಾಜ್ಯ ತಿಳಿಸಿದೆ.
ಆ.27ರಂದು ನಾಲ್ಕು ಜಲಾಶಯಗಳ ಒಳಹರಿವು 26,930 ಕ್ಯೂಸೆಕ್ ಇದ್ದದ್ದು, ಸೆ.8ರಂದು 3,887 ಕ್ಯೂಸೆಕ್ಗೆ ಕುಸಿದಿದೆ. ಸುಮಾರು 15 ದಿನಗಳಲ್ಲಿ 85.57% ಇಳಿಕೆ ಕಂಡುಬಂದಿದೆ. ಸೆ.15ರ ವೇಳೆಗೆ ಒಳಹರಿವು ಸುಮಾರು 3,000 ಕ್ಯೂಸೆಕ್ಗೆ ಇಳಿದಿದೆ. ಒಳಹರಿವು ಕುಸಿತ ಹಿನ್ನೆಲೆ ಹೆಚ್ಚುವರಿಯಾಗಿ ಹೊರಹರಿವು ಹರಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದೆ.

