ಬೆಂಗಳೂರು: ಯಾವ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆ ಇದೆ. ಯಾವ ದೇಶದಲ್ಲಿ ಮಾನವತ್ವದ ಹಕ್ಕುಗಳಿಗೆ ಬೆಲೆ ಇದೆ. ಯಾವ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ. ಯಾವ ದೇಶದ ಆಡಳಿತದಲ್ಲಿ ಜನಸಮುದಾಯದ ಭಾಗವಹಿಸುವಿಕೆ ಇದೆ ಮತ್ತು ಯಾವ ದೇಶದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇದೆಯೋ, ಆ ದೇಶಗಳಲ್ಲಿ ಮಾತ್ರ ಇಂದು ಶಾಂತಿಯುತ ವಾತಾವರಣವಿದೆ. ಅದನ್ನೇ ನಾವು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ (G.Parameshwara) ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಜಿ.ಪರಮೇಶ್ವರ ಅವರು, ಪ್ರಪಂಚದಲ್ಲಿ 90 ಪ್ರಜಾಪ್ರಭುತ್ವದ ದೇಶಗಳಿವೆ. ಇನ್ನುಳಿದ ದೇಶಗಳಲ್ಲಿ ನಡೆಯುವಂತಹ ವಿದ್ಯಮಾನಗಳೇ ಬೇರೆ, ಆಡಳಿತವೇ ಬೇರೆ. ನಮ್ಮ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳಗಳಲ್ಲಿ ಏನೇನು ನಡೆಯಿತು ಎಂಬುದನ್ನು ಗಮನಿಸಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಅಡಿಪಾಯ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಬೆಳವಣಿಗೆಗೆ ಗೆಲುವು ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಶಾಶ್ವತ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು
ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವ ಸಮುದಾಯವಿದೆ. 16-35 ವಯೋಮಾನದ ಸಮುದಾಯವಿದು. ಇವರು ಮುಂದಿನ ಭವಿಷ್ಯವನ್ನು ನಿರ್ಮಿಸುವವರು. ಈಗ ಜೆನ್-ಝೀ ಮುನ್ನೆಲೆಗೆ ಬಂದಿದೆ. ಇವರಿಗೆ ನಾವು ಪ್ರಾಮುಖ್ಯತೆ ನೀಡಬೇಕಿದೆ. ಉತ್ತಮ ರಾಜಕೀಯ ವ್ಯವಸ್ಥೆಯನ್ನು ಅವರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ, ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಾರೆಯೆರೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಪ್ರತಿಯೊಂದು ಶಾಲಾ-ಕಾಲೇಜುಗಳಿಗೆ, ಮನೆಗಳಿಗೆ ಸಂವಿಧಾನದ ಪೀಠಿಕೆಯನ್ನು ತಲುಪಿಸಿದ್ದೇವೆ. ನಿರಂತರವಾಗಿ ಸಂವಿಧಾನದ ಪೀಠಿಕೆಯನ್ನು ಮನನ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತಿದ್ದೇವೆ ಎಂದರು.
1997ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನಿರ್ಧಾರದ ಫಲವಾಗಿ ಪ್ರತಿ ವರ್ಷ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿಶ್ವಾದ್ಯಂತ ಮೆಲುಕು ಹಾಕಲಾಗುತ್ತಿದೆ. ನಮ್ಮ ರಾಜ್ಯದಲ್ಲಿ 12ನೇ ಶತಮಾನದಲ್ಲಿ ಒಂದು ಹೊಸ ಪ್ರಯತ್ನ ನಡೆಯಿತು. ಆ ಪ್ರಯತ್ನವೇ ಅನುಭವ ಮಂಟಪ. ಅಣ್ಣ ಬಸವಣ್ಣನವರು ಸಮಾನತೆಯ ಪ್ರತಿಪಾದನೆ ಮಾಡಿದರು. ಪ್ರತಿಯೊಂದು ಜಾತಿ, ಪಂಗಡಗಳಿಗೆ ಧ್ವನಿಯನ್ನು ನೀಡಬೇಕು. ಅದರ ಆಧಾರದ ಮೇಲೆ ಆಡಳಿತ ನಡೆಸಬೇಕು ಎಂದು ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಪ್ರಾರಂಭ ಮಾಡಿದರು. ಬಹುಶಃ ಇಡೀ ವಿಶ್ವದಲ್ಲಿ ಪ್ರಥಮ ಪ್ರಜಾಪ್ರಭುತ್ವ ಇದು ಎಂದರೆ ಅತಿಶಯೋಕ್ತಿಯಲ್ಲ. ಇಂದು ಬ್ರಿಟಿಷ್ ಪಾರ್ಲಿಮೆಂಟ್ ಅನ್ನು ದಿ ಫಾದರ್ ಆಫ್ ಡೆಮಾಕ್ರಸಿ ಎಂದು ಕರೆಯುತ್ತೇವೆ. ಆದರೆ, ಮದರ್ ಆಫ್ ಡೆಮಾಕ್ರಸಿ ಭಾರತದಲ್ಲಿದೆ. ಇಂದು ನಾವೇನಾದರೂ ಸಮಾನತೆಯನ್ನ ಪ್ರತಿಪಾದನೆ ಮಾಡುವುದರ ಜೊತೆಗೆ ಅನುಕರಣೆ ಮಾಡಿ ಬದುಕುತ್ತಿದ್ದೇವೆ ಎಂದು ಹೇಳಿದರೆ, ಆ ಪ್ರಜಾಪ್ರಭುತ್ವದ ಅಡಿಪಾಯ ಬಹಳ ಗಟ್ಟಿ ಇರುವುದರಿಂದ ನಾವು ಬದುಕುತ್ತಿದ್ದೇವೆ ಎಂಬುದು ನನ್ನ ಅಭಿಪ್ರಾಯ ಎಂದರು.
ಇಂದು ಕೇಂದ್ರ ಸರ್ಕಾರ ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲು ಯತ್ನಿಸುತ್ತಿದೆ. ಇದು ಬಹಳ ಅಪಾಯಕಾರಿ. ಇದರ ಪರಿಣಾಮ ಮೊದಲು ಬೀರುವುದೇ ಸಮಾಜದ ಕೆಳಸ್ತರದಲ್ಲಿರುವವರ ಮೇಲೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಇದರಿಂದ ತೊಂದರೆಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅಂಬೇಡ್ಕರ್ ಅವರು ಸಂವಿಧಾನತ್ಮಕ ರಕ್ಷಣೆಯನ್ನು ಈ ಸಮುದಾಯಗಳಿಗೆ ನೀಡಿದ್ದಾರೆ. ಇಂತಹ ರಕ್ಷಣಾತ್ಮಕ ವ್ಯವಸ್ಥೆ ವಿಶ್ವದ ಬೇರೆಡೆ ಕಾಣಸಿಗುವುದು ಅಪರೂಪ. ಅವರಿಗೆ ಯಾಕೆ ಇಂತಹ ರಕ್ಷಣೆ ಕೊಡಬೇಕು ಎಂಬ ಬಗ್ಗೆ ಇಂದು ಚಕಾರ ಎತ್ತಲಾಗುತ್ತಿದೆ. ಮೀಸಲಾತಿ ಏಕೆ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾದವರನ್ನು ನಾವು ಮೇಲೆತ್ತಬೇಕು ಎಂದು ಅಂಬೇಡ್ಕರ್ ಅವರು ಮೀಸಲಾತಿ ವ್ಯವಸ್ಥೆಯನ್ನು ತಂದರೇ ವಿನಃ ಬೇರೆ ಯಾವುದೇ ಕಾರಣಕ್ಕಲ್ಲ. ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬಾರದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್‌ಡಿಕೆ ಯತ್ನ: ಬಾಲಕೃಷ್ಣ ತಿರುಗೇಟು
ಪ್ರಜಾಪ್ರಭುತ್ವ ಎಂಬುದು ಕ್ರಾಂತಿಯಿಲ್ಲದೆ, ರಕ್ತಪಾತವಿಲ್ಲದೆ, ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ವ್ಯವಸ್ಥೆಯಾಗಿದೆ. ಸಾಮಾಜಿಕ ಪ್ರಜಾಸತ್ತೆಯ ಅಡಿಪಾಯ ಇಲ್ಲದೆ ರಾಜಕೀಯ ಪ್ರಜಾಸತ್ತೆ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಿಮಗೆ ಜನರ ಭಾವನೆಗಳು ಅರ್ಥವಾಗದಿದ್ದರೆ, ಜನರ ತೀರ್ಮಾನಗಳು ಗೊತ್ತಾಗದೇ ಹೋದರೆ ನಿಮ್ಮ ರಾಜಕೀಯ ನೆಲೆ ನಿಲ್ಲೋದಕ್ಕೆ ಸಾಧ್ಯವಿಲ್ಲ ಎಂಬ ಮಾತು ಕಟುಸತ್ಯ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೋಗುವ ಯಾರೂ ಅಧಿಕಾರದಲ್ಲಿ ಉಳಿಯುವುದಿಲ್ಲ. ಸಂವಿಧಾನ ರಚನೆಯಾಗಿ 80 ವರ್ಷಗಳೇ ಕಳೆದರೂ ಇಂದು ಅದರ ಪ್ರಖರತೆ ಹಾಗೆಯೇ ಉಳಿದಿದೆ. ಹಾಗಾಗಿ ಸಂವಿಧಾನಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರನ್ನು ಅಧಿಕಾರದಿಂದ ದೂರವುಳಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ ಎಂದರು.

