ಮೈಸೂರು: ಸದಾ ಶಾಂತಿಯುತವಾಗಿ ಗಣೇಶೋತ್ಸವ(Ganesh Chaturthi) ಆಚರಿಸಿಕೊಂಡು ಬರುತ್ತಿದ್ದ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ(T Narasipura) ಇದೀಗ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಹೇಳಿಕೆಯಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಗಣೇಶೋತ್ಸವ ಸಮಿತಿಯ ಯುವಕರಿಗೆ ಅವಾಚ್ಯ ಶಬ್ದಗಳಿಂದ ಧಮ್ಕಿ ಹಾಕಿದ್ದಾರೆ ಎನ್ನಲಾದ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್(Dhananjay) ಅವರ ವಿರುದ್ಧ ಸಾರ್ವಜನಿಕರು ಹಾಗೂ ಬಿಜೆಪಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಅಮಾನತಿಗೆ ಪಟ್ಟು ಹಿಡಿದಿದ್ದಾರೆ.
ಟಿ. ನರಸೀಪುರದಲ್ಲಿ ಈವರೆಗೂ ಯಾವುದೇ ಗಣೇಶೋತ್ಸವದ ಸಂದರ್ಭದಲ್ಲೂ ಗಲಭೆ, ಗಲಾಟೆಗಳು ನಡೆದ ನಿದರ್ಶನಗಳಿರಲಿಲ್ಲ. ಆದರೆ ಇನ್‌ಸ್ಪೆಕ್ಟರ್ ಧನಂಜಯ್ ಅವರ ಏಕಪಕ್ಷೀಯ ಮತ್ತು ದರ್ಪದ ಮಾತುಗಳು ಇಡೀ ಊರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದ ಯುವಕರಿಗೆ ಇನ್‌ಸ್ಪೆಕ್ಟರ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಶಾಂತಿ ಕದಡಲು ಯತ್ನಿಸಿದ ಇನ್‌ಸ್ಪೆಕ್ಟರ್ ಧನಂಜಯ್ ಅವರನ್ನು ಕೂಡಲೇ ಅಮಾನತು (Suspend) ಮಾಡಬೇಕೆಂದು ಸಾರ್ವಜನಿಕರು ಮತ್ತು ಬಿಜೆಪಿಗರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಸೀದಿ ರಸ್ತೆಗೆ ಗಣಪತಿ ಮೆರವಣಿಗೆ ಹೋಗಲು ನಮ್ಮ ಅಭ್ಯಂತರ ಇಲ್ಲ: ಮೈಸೂರು ಎಸ್‌ಪಿ
ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಇನ್‌ಸ್ಪೆಕ್ಟರ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳದೆ ಕಾಲಾವಕಾಶ ಕೇಳುತ್ತಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಅಧಿಕಾರಿಯನ್ನು ರಕ್ಷಿಸಲು ಇಲಾಖೆಯ ಉನ್ನತ ಮಟ್ಟದಲ್ಲಿ ಯತ್ನ ನಡೆಯುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಹಿರಿಯ ಅಧಿಕಾರಿಗಳು ನೀಡಿದ ಗಡುವಿನೊಳಗೆ ಇನ್‌ಸ್ಪೆಕ್ಟರ್ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

