ಮಂಡ್ಯ: ರಾಜ್ಯದಲ್ಲಿ ಮಳೆ ಹಾಗೂ ಗಾಳಿಯ ವ್ಯತ್ಯಯದಿಂದಾಗಿ ತೀವ್ರ ವಿದ್ಯುತ್ (Electricity) ಉತ್ಪಾದನಾ ಕೊರತೆ ಉಂಟಾಗಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಗರ ಪ್ರದೇಶಗಳಲ್ಲೂ ಕೂಡ ದಿನಕ್ಕೆ ಒಂದು ಗಂಟೆ ಲೋಡ್ ಶೆಡ್ಡಿಂಗ್ (Load Shedding) ಮಾಡಲಾಗುತ್ತಿದೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisiddegowda) ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಕಳೆದ ಏಳೆಂಟು ವರ್ಷಗಳಲ್ಲಿ ಇಂತಹ ಕಠಿಣ ವಿದ್ಯುತ್ ಸಮಸ್ಯೆ ಎದುರಾಗಿರಲಿಲ್ಲ. ಪ್ರಸ್ತುತ ಇಡೀ ದೇಶದಲ್ಲೇ ವಿದ್ಯುತ್ ಅಭಾವದ ಸಮಸ್ಯೆ ಕಾಡುತ್ತಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು: ಬೈರತಿ ಸುರೇಶ್
ವಿದ್ಯುತ್ ಉತ್ಪಾದನೆ ಕುಸಿತಕ್ಕೆ ಕಾರಣ
ಸಾಮಾನ್ಯವಾಗಿ ಗಾಳಿ ಯಂತ್ರಗಳ ಮೂಲಕ ನಿತ್ಯ 3,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಆದರೆ, ಇತ್ತೀಚೆಗೆ ಗಾಳಿಯ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿರುವುದರಿಂದ ಕೇವಲ 500 ಮೆಗಾವ್ಯಾಟ್ ಮಾತ್ರ ಉತ್ಪಾದನೆಯಾಗಿದೆ. ಇದರಿಂದಾಗಿ ಸುಮಾರು 2,500 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಾಗಿದೆ. ಉಳಿದ ವಿದ್ಯುತ್‌ನ್ನು ಎಲ್ಲಿಂದ ತರಬೇಕು ಎಂಬ ಗಂಭೀರ ಸವಾಲು ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ನಾವು ಅಸ್ಸಾಂ ಮತ್ತು ಪಂಜಾಬ್ ರಾಜ್ಯಗಳಿಗೆ ವಿದ್ಯುತ್ ನೀಡುತ್ತಿದ್ದು, ಬೇಸಿಗೆಯಲ್ಲಿ ಅವರು ನಮಗೆ ಮರುಪಾವತಿಸುತ್ತಿದ್ದರು. ಈ ಬಾರಿ ನಾವು ಅವರಿಂದ ಮುಂಚಿತವಾಗಿ ವಿದ್ಯುತ್ ಪಡೆದುಕೊಂಡಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಅವರಿಗೆ ವಾಪಸ್ ಕೊಡಲು ಸಾಧ್ಯವಾಗುತ್ತಿಲ್ಲ ಎಂದರು.
ರಾಯಚೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯಾಗಿಲ್ಲ. ನಮಗೆ 2,000 ಮೆಗಾವ್ಯಾಟ್ ವಿದ್ಯುತ್ ತುರ್ತಾಗಿ ಬೇಕಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಕೇವಲ 200 ಮೆಗಾವ್ಯಾಟ್ ಮಾತ್ರ. ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್ ವಿದ್ಯುತ್‌ನ್ನು 10 ರೂ.ಗಳಂತೆ ದುಬಾರಿ ಬೆಲೆಗೆ ಖರೀದಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಲೇಬಾರದು ಎಂಬುದು ಸರ್ಕಾರದ ದೃಢ ನಿರ್ಧಾರವಾಗಿದೆ. ಆದರೂ ಕೂಡ ಅನಿವಾರ್ಯ ಪರಿಸ್ಥಿತಿಯಿಂದಾಗಿ ನಗರ ಪ್ರದೇಶಗಳಲ್ಲಿ ಒಂದು ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಉಳಿದಂತೆ ಹಳ್ಳಿಗಳಿಗೆ ತ್ರಿ-ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ.
ಇನ್ನೆರಡು ದಿನಗಳಲ್ಲಿ ಈ ವಿದ್ಯುತ್ ಸಮಸ್ಯೆ ಬಹುತೇಕ ಸರಿಹೋಗಲಿದೆ. ನೂರಕ್ಕೆ ನೂರು ಪ್ರತಿಶತ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 80% ರಷ್ಟು ಸಮಸ್ಯೆ ಬಗೆಹರಿಯಲಿದೆ. ಮಳೆ ಮತ್ತು ಗಾಳಿಯ ಏರಿಳಿತದಿಂದ ಉಂಟಾಗಿರುವ ಈ ತಾತ್ಕಾಲಿಕ ಸಮಸ್ಯೆಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 9 ಎಲಿವೇಟೆಡ್ ಕಾರಿಡಾರ್ – ಎಲ್ಲಿ ನಿರ್ಮಾಣವಾಗುತ್ತೆ?

