ಗಣೇಶ ಚತುರ್ಥಿ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಗಣಪತಿಯ ಮೂರ್ತಿ, ಮೋದಕ, ಕಡುಬು, ಪೂಜೆ ಮತ್ತು ಆರತಿ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚತುರ್ಥಿಯ ಸಂಭ್ರಮ ಗಣೇಶನಿಗಷ್ಟೇ ಸೀಮಿತವಲ್ಲ. ಚತುರ್ಥಿಯ ನಂತರದ ದಿನ ಅಂದರೆ ಎರಡನೇ ದಿನ ಮತ್ತೊಂದು ವಿಶೇಷ ಆಚರಣೆ ನಡೆಯುತ್ತದೆ.
ಈ ದಿನ ಗಣೇಶನ ವಾಹನವಾದ ಮೂಷಿಕನಿಗೆ ಅಂದರೆ ಇಲಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಕೆಲವರು ಮಣ್ಣಿನಿಂದ ಮೂಷಿಕನ ಮೂರ್ತಿ ತಯಾರಿಸಿ ಅಥವಾ ಮಣ್ಣಿನ ಪ್ರತಿಕೃತಿಯನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಗಣೇಶನ ಜೊತೆ ಮೂಷಿಕನಿಗೂ ಪೂಜೆ ಸಲ್ಲಿಸುವ ಮೂಲಕ ಈ ಆಚರಣೆ ವಿಭಿನ್ನವಾಗಿ ಕಾಣಿಸುತ್ತದೆ.

ಗಣಪತಿಗೆ ಪೂಜೆ… ಮರುದಿನ ಮೂಷಿಕನಿಗೂ ಪೂಜೆ
ಗಣೇಶನಿಗೆ ಮೂಷಿಕ ವಾಹನ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಆ ಮೂಷಿಕನಿಗೇ ಪ್ರತ್ಯೇಕವಾಗಿ ಪೂಜೆ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದ ಕೆಲವು ಸಮುದಾಯಗಳಲ್ಲಿ ಕಂಡುಬರುತ್ತದೆ.
ಇದು ಕೇವಲ ಒಂದು ಪ್ರಾಣಿ ಪೂಜೆ ಅಲ್ಲ. ಗಣೇಶನ ಜೊತೆ ಸದಾ ಇರುವ ಆತನ ವಾಹನಕ್ಕೂ ಗೌರವ ಸಲ್ಲಿಸುವ ಭಾವನೆ ಇದರ ಹಿಂದೆ ಇದೆ ಎಂದು ಸ್ಥಳೀಯ ನಂಬಿಕೆಗಳಲ್ಲಿ ಹೇಳಲಾಗುತ್ತದೆ.
ಸಾಮಾನ್ಯವಾಗಿ ಗಣೇಶನ ಪೂಜೆಯಲ್ಲಿ ಮೂಷಿಕನಿಗೆ ಕೂಡ ನೈವೇದ್ಯ ಅರ್ಪಿಸುವ ಪದ್ಧತಿ ಇದೆ. ಆದರೆ, ಕೆಲವು ಕಡೆ ಮರುದಿನವೇ ಮೂಷಿಕನನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ಆಚರಣೆ ಮಾಡಲಾಗುತ್ತದೆ.
ಮಣ್ಣಿನ ಮೂರ್ತಿ ಯಾಕೆ?
ಕೆಲವು ಕಡೆ ಈ ಆಚರಣೆಯಲ್ಲಿ ಮಣ್ಣಿನ ಮೂರ್ತಿಗೆ ವಿಶೇಷ ಸ್ಥಾನ ಇರುತ್ತದೆ. ಮಣ್ಣಿನಿಂದ ರೂಪ ತಯಾರಿಸಿ, ಅದನ್ನು ದೇವರ ರೂಪದಂತೆ ಅಲಂಕರಿಸಿ ಪೂಜೆ ಮಾಡುತ್ತಾರೆ. ಹೂವು, ಅರಿಶಿನ, ಕುಂಕುಮ, ನೈವೇದ್ಯ ಸೇರಿದಂತೆ ತಮ್ಮ ಕುಟುಂಬದ ಸಂಪ್ರದಾಯದಂತೆ ಪೂಜಾ ವಿಧಿಗಳನ್ನು ನಡೆಸುತ್ತಾರೆ. ಇಲ್ಲಿ ಕೂಡ ಗಣೇಶ ಚತುರ್ಥಿಯ ಮೂಲ ಆಚರಣೆಯಲ್ಲಿರುವ ಮಣ್ಣಿನ ಮೂರ್ತಿ ಮತ್ತು ಪೂಜೆಯ ಪರಂಪರೆಯೊಂದಿಗಿನ ಸಂಪರ್ಕ ಕಾಣಬಹುದು. ಗಣೇಶ ಚತುರ್ಥಿಯಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಬಗ್ಗೆ ಧಾರ್ಮಿಕ ಪರಂಪರೆಯಲ್ಲಿ ಉಲ್ಲೇಖವಿದೆ.

ಊಟದಲ್ಲೂ ಇದೆ ಈ ಹಬ್ಬದ ವಿಶೇಷತೆ
ಈ ಆಚರಣೆಯ ಮತ್ತೊಂದು ಕುತೂಹಲಕಾರಿ ಭಾಗ ವಿಶೇಷ ಅಡುಗೆ. ಉತ್ತರ ಕರ್ನಾಟಕದ ಮನೆಗಳಲ್ಲಿ ಹಬ್ಬ ಅಂದರೆ ಊಟಕ್ಕೂ ತನ್ನದೇ ಆದ ಮಹತ್ವ. ಗಣೇಶ ಹಬ್ಬದ ಸಂದರ್ಭದಲ್ಲಿ ಹೋಳಿಗೆ, ಕಡುಬು, ಹುಗ್ಗಿ ಸೇರಿದಂತೆ ಹಲವು ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಮೂಷಿಕನ ದಿನ ಎಂದು ಆಚರಿಸುವ ಕೆಲವು ಸಮುದಾಯಗಳಲ್ಲಿ ಸಾಮಾನ್ಯ ಸಿಹಿ ನೈವೇದ್ಯದ ಜೊತೆಗೆ ವಿಭಿನ್ನ ಆಹಾರ ಪದ್ಧತಿಯೂ ಕಾಣಿಸುತ್ತದೆ.
ಕೆಲವೆಡೆ ನೈವೇದ್ಯಕ್ಕೆ ಮಾಂಸಾಹಾರ
ಇಲ್ಲೇ ಈ ಆಚರಣೆ ಇನ್ನಷ್ಟು ಕುತೂಹಲ ಮೂಡಿಸುತ್ತದೆ. ಹುಬ್ಬಳ್ಳಿಯ ಮತ್ತು ಇನ್ನಿತರ ಬಯಲುಸೀಮೆ ನಗರ ಮತ್ತು ಹಳ್ಳಿಗಳಲ್ಲಿ ಸಾವಜಿ, ಮರಾಠ ಮತ್ತು ಇನ್ನಿರತ ಸಮುದಾಯಗಳು ಗಣೇಶ ಚತುರ್ಥಿಯ ನಂತರದ ದಿನ(ಇಲಿ ವಾರ)ದಂದು ಮಾಂಸಾಹಾರಿ ಖಾದ್ಯಗಳನ್ನು ಗಣೇಶನ ವಾಹನ ಮೂಷಿಕನಿಗೆ ಅರ್ಪಿಸುವ ಸಂಪ್ರದಾಯವಿದೆ.
ಸಾಮಾನ್ಯವಾಗಿ ಗಣೇಶನಿಗೆ ಮೋದಕ, ಕಡುಬು, ಹಣ್ಣು-ಹಂಪಲುಗಳನ್ನು ನೈವೇದ್ಯವಾಗಿ ಅರ್ಪಿಸುವುದನ್ನು ನೋಡುತ್ತೇವೆ. ಆದರೆ ಈ ಸಮುದಾಯದ ನಂಬಿಕೆಯ ಪ್ರಕಾರ, ತಾವು ತಿನ್ನುವ ಆಹಾರವನ್ನೇ ದೇವರಿಗೂ ಅರ್ಪಿಸಬೇಕು ಎಂಬ ಭಾವನೆಯಿದೆ. ವರದಿಗಳ ಪ್ರಕಾರ, ಕೆಲವರು ಗಣೇಶನ ವಾಹನವಾದ ಮೂಷಿಕನಿಗೂ ಆಹಾರ ಅರ್ಪಿಸುತ್ತಾರೆ.
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ, ಎಲ್ಲ ಮನೆಗಳಲ್ಲೂ ಅಥವಾ ಎಲ್ಲ ಗಣೇಶ ಭಕ್ತರೂ ಈ ರೀತಿ ಆಚರಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ನಿರ್ದಿಷ್ಟ ಸಮುದಾಯಗಳು ಮತ್ತು ಕೆಲವು ಕುಟುಂಬಗಳಲ್ಲಿ ಉಳಿದುಕೊಂಡಿರುವ ಸ್ಥಳೀಯ ಸಂಪ್ರದಾಯ. ಆದ್ದರಿಂದ

ಮೂಷಿಕನಿಗೂ ಇಷ್ಟೊಂದು ಗೌರವ ಯಾಕೆ?
ಗಣೇಶನ ವಾಹನವಾಗಿರುವ ಮೂಷಿಕನಿಗೂ ಪೌರಾಣಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ.
ದೊಡ್ಡ ದೇಹದ ಗಣಪತಿಗೆ ಚಿಕ್ಕ ಮೂಷಿಕ ವಾಹನವಾಗಿರುವುದೇ ಒಂದು ಕುತೂಹಲಕಾರಿ ಸಂಕೇತ. ಸಾಮಾನ್ಯವಾಗಿ ಇದನ್ನು ದೊಡ್ಡದು-ಚಿಕ್ಕದು ಎಂಬ ಭೇದವಿಲ್ಲದೆ ಎಲ್ಲರಿಗೂ ಸ್ಥಾನವಿದೆ ಎಂಬ ಆಧ್ಯಾತ್ಮಿಕ ಅರ್ಥದೊಂದಿಗೆ ವಿವರಿಸಲಾಗುತ್ತದೆ. ಹೀಗಾಗಿ ಗಣೇಶನ ಪೂಜೆಯಲ್ಲಿ ಮೂಷಿಕನನ್ನು ಮರೆತುಬಿಡದೇ, ಆತನಿಗೂ ನೈವೇದ್ಯ ಅರ್ಪಿಸುವುದು ಭಕ್ತಿಯ ಒಂದು ಭಾಗವಾಗಿದೆ. ಗಣೇಶನ ಜೊತೆ ಆತನ ವಾಹನಕ್ಕೂ ಗೌರವ ಕೊಡುವ ಈ ವಿಭಿನ್ನ ಆಚರಣೆ, ಉತ್ತರ ಕರ್ನಾಟಕದ ಸ್ಥಳೀಯ ಸಂಸ್ಕೃತಿಯ ವೈವಿಧ್ಯಕ್ಕೆ ಒಂದು ವಿಶೇಷ ಉದಾಹರಣೆ.

