ಈ ವರ್ಷದ ಆಸ್ಕರ್ ಸ್ಪರ್ಧೆಯನ್ನು ‘ಹನುಮಾನ್ ಅಂಶ್’ (Hanuman Ansh) ಸಿನಿಮಾ ಮಿಸ್ ಮಾಡಿಕೊಂಡಿದೆ. ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಪರಿಗಣನೆಗೆ ಚಿತ್ರವನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಆಸ್ಕರ್ ಸಲ್ಲಿಕೆ ಗಡುವನ್ನು ಚಿತ್ರತಂಡ ಮಿಸ್ ಮಾಡಿಕೊಂಡಿರುವುದಾಗಿ ನಿರ್ಮಾಪಕಿ ನಮ್ರತಾ ಸಿಂಗ್ ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಮ್ರತಾ ಸಿಂಗ್, ಹಲವಾರು ಕರೆಗಳು ಬಂದ ಬಳಿಕವೇ ಆಸ್ಕರ್ ಸಲ್ಲಿಕೆ ಅವಧಿ ಮುಕ್ತಾಯವಾಗಿರುವುದು ತಂಡಕ್ಕೆ ಗೊತ್ತಾಯಿತು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 7 ಕೊನೆಯ ದಿನವಾಗಿತ್ತು. ನಾವು ಆಸ್ಕರ್ ಸಲ್ಲಿಕೆ ಗಡುವನ್ನು ತಪ್ಪಿಸಿಕೊಂಡಿದ್ದೇವೆ. ಸಿನಿಮಾ ಸಬ್ಮಿಟ್ ಮಾಡಿಲ್ಲ ಎಂದು ಸಾವಿರಾರು ಜನರಿಂದ ಕರೆಗಳು ಬಂದವು. ಆದರೆ, ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ. ನಾವು ತುಂಬಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆ. ಅಲ್ಲದೆ, ನಮ್ಮದು ತುಂಬಾ ಸಣ್ಣ ತಂಡ ಎಂದು ಅವರು ಹೇಳಿದ್ದಾರೆ.
ಸದ್ಯ ‘ಹನುಮಾನ್ ಅಂಶ್’ ಸಿನಿಮಾವನ್ನು ಇತರ ಭಾಷೆಗಳ ಪ್ರೇಕ್ಷಕರಿಗೂ ತಲುಪಿಸುವ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಒಂದೇ ಸಮಯದಲ್ಲಿ ಎಲ್ಲ ಕೆಲಸಗಳನ್ನು ಮಾಡುವ ಬದಲು, ಒಂದೊಂದೇ ಕೆಲಸವನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದು ನಮ್ರತಾ ತಿಳಿಸಿದ್ದಾರೆ.
ಮೊದಲು ತೆಲುಗು ಭಾಷೆಗೆ ಡಬ್ಬಿಂಗ್ ಮಾಡಲಾಗಿದೆ. ಬಳಿಕ ಉಳಿದ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಯೋಜನೆ ಇದೆ. ವಿಭಿನ್ನ ಸಾಮರ್ಥ್ಯದ ಜನರೂ ಸಿನಿಮಾ ವೀಕ್ಷಿಸಲು ಸಾಧ್ಯವಾಗುವಂತೆ ಆಕ್ಸೆಸಿಬಿಲಿಟಿ ಕೆಲಸಗಳನ್ನೂ ಮಾಡಲಾಗುತ್ತಿದೆ. ಕಲಾವಿದರು ಹಾಗೂ ನಿರ್ದೇಶಕರು ಪ್ರವಾಸದಲ್ಲಿದ್ದು, ಕಚೇರಿಯಲ್ಲೂ ಯಾರೂ ಇಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶರಣ್ ಕಂಠಸಿರಿಯಲ್ಲಿ ಮೂಡಿ ಬಂತು ಜಿಗಿ ಜಿಕ್ಕ ಜಿಕ್ಕ ಸಾಂಗ್
ಸೆಪ್ಟೆಂಬರ್ 18ಕ್ಕೆ ತೆಲುಗು ವರ್ಷನ್ ರಿಲೀಸ್
‘ಹನುಮಾನ್ ಅಂಶ್’ ಸಿನಿಮಾದ ತೆಲುಗು ವರ್ಷನ್ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಿಗೆ ಬರಲಿದೆ. ಸದ್ಯ ತೆಲುಗು ಭಾಷೆಯಲ್ಲಿ ಮಾತ್ರ ಸಿನಿಮಾ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಇತರ ಭಾಷೆಗಳ ಆವೃತ್ತಿಗಳ ಕೆಲಸ ಕೈಗೆತ್ತಿಕೊಳ್ಳಲು ಚಿತ್ರತಂಡ ಯೋಜಿಸಿದೆ.
ಆಗಸ್ಟ್ 7ರಂದು ತೆರೆಕಂಡಿದ್ದ ಸಿನಿಮಾ
ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿರುವ ‘ಹನುಮಾನ್ ಅಂಶ್’ ಸಿನಿಮಾ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಶೋಭಿನಾವ್ ಸತ್ಯಾ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್ ಕೆ. ಆನಂದ್, ನಿಖಿಲ್ ದುಬೆ, ಅನಿಲ್ ರಸ್ತೋಗಿ, ಸುಗಂಧ ಮಲ್ಹೋತ್ರಾ ಮತ್ತು ಭಗವಾನದಾಸ್ ಪಟೇಲ್ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವ ಭಾರತದ ಹಿನ್ನೆಲೆಯ ಕಥೆಯನ್ನು ಸಿನಿಮಾ ಹೊಂದಿದೆ. ತಾಯಿಯ ಮರಣದ ಬಳಿಕ ದೇವರನ್ನು ಹುಡುಕುತ್ತಾ ಮನೆ ಬಿಟ್ಟು ಹೊರಡುವ ಲಕ್ಷ್ಮಿ ನಾರಾಯಣ್ ಎಂಬ ಬಾಲಕನ ಪ್ರಯಾಣದ ಕಥೆ ಇದಾಗಿದೆ. ಉತ್ತರ ಭಾರತದಾದ್ಯಂತ ನಡೆಯುವ ಈ ಪ್ರಯಾಣ ಅಂತಿಮವಾಗಿ ಅವರು ನೀಮ್ ಕರೋಲಿ ಬಾಬಾ ಆಗಿ ರೂಪುಗೊಳ್ಳುವ ಹಾದಿಗೆ ಕಾರಣವಾಗುತ್ತದೆ.
ಹೊಸ ಇತಿಹಾಸ ಸೃಷ್ಟಿಸಿದ ‘ಹನುಮಾನ್ ಅಂಶ್’
‘ಹನುಮಾನ್ ಅಂಶ್’ (Hanuman Ansh) ಚಲನಚಿತ್ರವು ಕೇವಲ 1.75 ರಿಂದ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವದಾದ್ಯಂತ ಭರ್ಜರಿ 236 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಮಹಿಮೆಯನ್ನಾಧರಿಸಿದ ಈ ಭಕ್ತಿ ಪ್ರಧಾನ ಚಿತ್ರವು ಆರಂಭದಲ್ಲಿ ಕೇವಲ 10 ಲಕ್ಷ ರೂ.ನೊಂದಿಗೆ ಮಂದಗತಿಯ ಓಪನಿಂಗ್ ಪಡೆದರೂ, ಪ್ರೇಕ್ಷಕರ ಅದ್ಭುತ ವಿಮರ್ಶೆಗಳಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಹೂಡಿಕೆಗಿಂತ 118 ಪಟ್ಟು ಹೆಚ್ಚು ಲಾಭ ಗಳಿಸಿದೆ. ಕೇವಲ 25 ಸ್ಕ್ರೀನ್‌ಗಳಲ್ಲಿ ಶುರುವಾದ ಈ ಸಿನಿಮಾ ಈಗ ದೇಶಾದ್ಯಂತ 2,000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲೂ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ಹಾಗೂ ಅತ್ಯುತ್ತಮ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ಕಣ್ಣೀರಿಟ್ಟ ಸೌಂದರ್ಯ ಶೆಟ್ಟಿ… ಸಿಕ್ಕಾಪಟ್ಟೆ ಟ್ರೋಲ್ – ಇನ್‌ಸ್ಟಂಟ್ ಕರ್ಮ ಎಂದ ನೆಟ್ಟಿಗರು, ಅಂಥದ್ದೇನಾಯ್ತು?

