ಗಣೇಶ ಚತುರ್ಥಿ ಬಂದಾಗ ಎಲ್ಲೆಡೆ ಕೇಳಿಸುವ `ಗಣಪತಿ ಬಪ್ಪಾ ಮೋರಿಯಾ’ ಘೋಷಣೆ, ಮನೆಮನೆಗಳಲ್ಲಿ ಪ್ರತಿಷ್ಠಾಪನೆಯಾಗುವ ಗಣೇಶನ ಮೂರ್ತಿ, ಹೂವು-ಹಣ್ಣುಗಳಿಂದ ನಡೆಯುವ ಪೂಜೆ ಇವೆಲ್ಲವೂ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಆದರೆ ಗಣಪತಿಯ ಮೂರ್ತಿಯನ್ನು ಗಮನಿಸಿದಾಗ ಮನುಷ್ಯನ ದೇಹಕ್ಕೆ ಆನೆಯ ತಲೆ ಏಕೆ? ಗಣಪತಿಗೆ ಈ ವಿಶಿಷ್ಟ ರೂಪ ಹೇಗೆ ಬಂತು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಯಾವುದೇ ಕಾರ್ಯಕ್ರಮವಾಗಲಿ, ಮದುವೆ, ಜಾತ್ರೆ, ಗೃಹಪ್ರವೇಶ ಇನ್ನು ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೊದಲು ಗಣಪನನ್ನು ಆರಾಧಿಸುತ್ತಾರೆ. ಯಾಕೆಂದರೆ ಗಣಪನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಆದ್ದರಿಂದ ತಾವು ಮಾಡುವ ಕಾರ್ಯಕ್ಕೆ ಯಾವುದೇ ವಿಘ್ನ ಬರಬಾದರು ಎಂದು ಗಣಪನನ್ನು ಪೂಜಿಸುತ್ತಾರೆ. ಗಣೇಶನಿಗೆ ನಾನಾ ಹೆಸರುಗಳಿವೆ, ಗಣಪ, ಏಕದಂತ, ವಿಘ್ನೇಶ, ಗೌರಿತನಯ, ವಿನಾಯಕ, ಗಜಮುಖ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಗಣಪತಿಯ ಆನೆಯ ತಲೆಯ ಹಿಂದೆ ಅತ್ಯಂತ ಪ್ರಸಿದ್ಧವಾದ ಪೌರಾಣಿಕ ಕಥೆಯಿದೆ.
ಗಜಮುಖನಾಗಿದ್ದು ಹೇಗೆ?
ಒಮ್ಮೆ ಪಾರ್ವತಿ ಸ್ನಾನಕ್ಕೆ ಹೋಗುವ ಮೊದಲು ದೇಹದ ಕೊಳೆಯಿಂದ ಒಂದು ಮನುಷ್ಯನ ಗೊಂಬೆಯನ್ನ ತಯಾರಿಸುತ್ತಾಳೆ. ನಂತರ ಅದಕ್ಕೆ ಜೀವ ಸಹ ನೀಡುತ್ತಾಳೆ. ಪಾರ್ವತಿ ಸ್ನಾನಕ್ಕೆ ಹೋಗಬೇಕಾದರೆ ಕಾವಲು ಕಾಯುವವರು ಯಾರೂ ಇರಲಿಲ್ಲ. ಆದ್ದರಿಂದ ತಯಾರಿಸಿದ ಮನುಷ್ಯನಿಗೆ ವಿನಾಯಕ ಎಂದು ಹೆಸರಿಟ್ಟು, ಕಾವಲು ನಿಲ್ಲಲು ಹೇಳುತ್ತಾಳೆ. ಅಷ್ಟರಲ್ಲಿ ಶಿವನು ಬರುತ್ತಾನೆ ಮತ್ತು ಗಣೇಶನು ಅವನನ್ನು ಅಲ್ಲಿಯೇ ನಿಲ್ಲಿಸುತ್ತಾನೆ.
ಶಿವ ಸ್ನಾನದ ಗೃಹದ ಒಳಗೆ ಹೋಗಲು ಯತ್ನಿಸುತ್ತಾನೆ. ಆದರೆ ಗಣೇಶ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಕೋಪಗೊಂಡ ಶಿವ ಗಣೇಶನ ರುಂಡವನ್ನು ಕತ್ತರಿಸುತ್ತಾನೆ. ಈ ವೇಳೆ ಸ್ನಾನದ ಗೃಹದಿಂದ ಹೊರ ಬಂದು ತನ್ನ ಮಗನ ಸ್ಥಿತಿಯನ್ನು ಕಂಡು ಕೋಪಗೊಂಡು ಮಹಾಕಾಳಿಯ ರೂಪತಾಳಿ ಪ್ರಕೃತಿಯನ್ನೇ ನಾಶ ಮಾಡಲು ಮುಂದಾಗುತ್ತಾಳೆ.
ಈ ವೇಳೆ ತಾಯಿ ಪಾರ್ವತಿ ದೇವಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಏನು ಪ್ರಯೋಜನವಾಗುವುದಿಲ್ಲ. ಆಗ ತನ್ನ ಮಗನಿಗೆ ಜೀವಕೊಡುವಂತೆ ಪಾರ್ವತಿ ಹೇಳುತ್ತಾಳೆ. ಈ ವೇಳೆ ಶಿವ ಕತ್ತರಿಸಿದ ಗಣೇಶನ ರುಂಡ ಸಿಗುವುದಿಲ್ಲ. ಕೊನೆಗೆ ಉತ್ತರ ದಿಕ್ಕಿಗೆ ಯಾರು ತಲೆ ಇಟ್ಟು ಮಲಗಿರುತ್ತಾರೋ ಅವರ ತಲೆ ತಂದು ಜೋಡಿಸಿದರೆ ಜೀವ ಬರುತ್ತದೆ ಎಂದು ಹೇಳುತ್ತಾನೆ.
ಶಿವನು ತನ್ನ ಅನುಯಾಯಿಗಳಿಗೆ ಉತ್ತರ ದಿಕ್ಕಿಗೆ ಕಾಣುವ ಮೊದಲ ತಲೆಯನ್ನು ತನ್ನಿ ಎಂದು ಹೇಳುತ್ತಾನೆ. ಎಲ್ಲರೂ ಹುಡುಕಿಕೊಂಡು ಹೋಗುತ್ತಾರೆ. ಆದರೆ ಯಾವುದೇ ಮನುಷ್ಯರ ತಲೆಯೂ ಉತ್ತರ ದಿಕ್ಕಿಗೆ ಸಿಗುವುದಿಲ್ಲ, ಆದರೆ ಒಂದು ಆನೆ ಮಾತ್ರ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿರುತ್ತದೆ. ಅದರ ತಲೆಯನ್ನ ಕತ್ತರಿಸಿಕೊಂಡು ಬರಲಾಗುತ್ತದೆ. ಅದನ್ನೇ ವಿನಾಯಕನ ದೇಹಕ್ಕೆ ಹಾಕಲಾಗುತ್ತದೆ. ಈ ಕಾರಣದಿಂದ ಗಜಮುಖ ಎಂದು ವಿನಾಯಕನಿಗೆ ಹೆಸರು ಬಂತು.

