ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶನಿವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್(Xi Jinping) ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಸೇರಿದಂತೆ ಬ್ರಿಕ್ಸ್ (BRICS) ಒಕ್ಕೂಟದ ಕೆಲ ನಾಯಕರು ಗೈರಾಗಿದ್ದರು.
ಶನಿವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಿದ್ದ ಚೀನಾ ಅಧ್ಯಕ್ಷರು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಲ್ಲದೆ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಸುದೀರ್ಘ ಪ್ರಯಾಣ ಹಾಗೂ ಸಮಯದ ವ್ಯತ್ಯಾಸದಿಂದ (Time difference) ಉಂಟಾದ ಆಯಾಸದ ಹಿನ್ನೆಲೆಯಲ್ಲಿ ಕ್ಸಿ ಜಿನ್ಪಿಂಗ್ ಅವರು ಔತಣಕೂಟದಿಂದ ದೂರ ಉಳಿದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ನ ಇತರ ನಾಯಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಭಾರತ ಸರ್ಕಾರದ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅತ್ಯಗತ್ಯ: ಜಿನ್ಪಿಂಗ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ
ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವೀಸ್, ಸುವೇಂದು ಅಧಿಕಾರಿ ಮತ್ತು ಹಿಮಂತ ಬಿಸ್ವ ಶರ್ಮಾ (ಅಸ್ಸಾಂ) ಸಹ ಭಾಗವಹಿಸಿದ್ದರು. ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸಂಸತ್ ಭವನದಿಂದ ಎರಡು ಬಸ್ಗಳ ಮೂಲಕ ಭಾರತ್ ಮಂಟಪಕ್ಕೆ ಆಗಮಿಸಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಈ ಶೃಂಗಸಭೆಯು ಇಂದು ಮುಕ್ತಾಯಗೊಳ್ಳಲಿದ್ದು, 11 ಸದಸ್ಯ ರಾಷ್ಟ್ರಗಳು, 10 ಪಾಲುದಾರ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಇಂದು ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

