ನವದೆಹಲಿ: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅತ್ಯಗತ್ಯ ಎಂದು ದ್ವಿಪಕ್ಷೀಯ ಮಾತುಕತೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ ತಿಳಿಸಿದರು.
ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಉಭಯ ದೇಶಗಳು ಪರಸ್ಪರರ ಸಾಮರ್ಥ್ಯಗಳಿಂದ ಪೂರ್ಣವಾಗಿ ಕಲಿಯಲು ಮತ್ತು ಪರಸ್ಪರ ಬೆಂಬಲಿಸಲು ಸಾಧ್ಯವಿದೆ ಎಂದು ಹೇಳಿದರು.
ಏಳು ವರ್ಷಗಳ ನಂತರ ಭಾರತಕ್ಕೆ ತಮ್ಮ ಮೊದಲ ಭೇಟಿಗಾಗಿ ಇಂದು ನವದೆಹಲಿಗೆ ಆಗಮಿಸಿದ್ದ ಜಿನ್‌ಪಿಂಗ್, ಗಡಿ ಸಮಸ್ಯೆಗಳು, ವ್ಯಾಪಾರ ಮತ್ತು ಹೂಡಿಕೆಯ ವಿಷಯಗಳ ಮೇಲೆ ಗಮನಹರಿಸಿ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.
ಭಾರತವು ಬ್ರಿಕ್ಸ್ (BRICS) ಶೃಂಗಸಭೆಯನ್ನು ಆಯೋಜಿಸುತ್ತಿರುವ ಸಂದರ್ಭದಲ್ಲೇ ಚೀನಾದ ಅಧ್ಯಕ್ಷರು ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಶೃಂಗಸಭೆಯ ಅಂಗವಾಗಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಮಾತುಕತೆಗಳಲ್ಲಿ, ಎರಡೂ ರಾಷ್ಟ್ರಗಳ ಸಂಬಂಧಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ ಎಂದು ಮೋದಿ ಒತ್ತಿ ಹೇಳಿದರು.
ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯು ಅತ್ಯಗತ್ಯ ಆಧಾರವಾಗಿದೆ. ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಎರಡೂ ಕಡೆಯವರು ಪಾಲಿಸಬೇಕಾದ ಅಗತ್ಯದ ಬಗ್ಗೆ ತಿಳಿಸಿದರು.
ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ರಾಜಕೀಯ ದೃಷ್ಟಿಕೋನ ಹಾಗೂ ಉಭಯ ದೇಶಗಳ ಜನರ ದೀರ್ಘಕಾಲೀನ ಹಿತಾಸಕ್ತಿಗಳ ಆಧಾರದ ಮೇಲೆ, ಗಡಿ ಸಮಸ್ಯೆಗೆ ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳುವ ಬದ್ಧತೆಯನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು.

