ನವದೆಹಲಿ: ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ ಅಂತಿಮ ದಿನ. ಇಂದು ಹಲವು ಸಭೆಗಳು ಹಾಗೂ ಹಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಹಲವು ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿಯಾಗಲಿದ್ದು, ಸಂಜೆ ವೇಳೆಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ಬಹುತೇಕ ಯಶಸ್ಸು ಕಂಡಿದೆ. ಶೃಂಗಸಭೆಯ ಕಡೆಯ ದಿನವಾದ ಇಂದು ಹಲವು ಸಭೆಗಳು ನಡೆಯಲಿವೆ. ಬೆಳಗ್ಗೆ 9:55 ಕ್ಕೆ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳು ಹಾಗೂ ಆಹ್ವಾನಿತ ರಾಷ್ಟ್ರಗಳ ನಾಯಕರು ಭಾರತ್ ಮಂಟಪಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 10:35ಕ್ಕೆ ಬ್ರಿಕ್ಸ್ ನಾಯಕರ ಅಧಿಕೃತ ಗ್ರೂಪ್ ಫೋಟೊ ನೀಡಲಿದ್ದಾರೆ. ಬಳಿಕ ಬೆಳಗ್ಗೆ 10:50ಕ್ಕೆ ಪ್ರಮುಖ ಮುಕ್ತ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ, ಸ್ಥಿರತೆ, ನಾವೀನ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಾತ್ರ ಕುರಿತು ಚರ್ಚೆ ನಡೆಯಲಿದೆ. ಇದನ್ನೂ ಓದಿ: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅತ್ಯಗತ್ಯ: ಜಿನ್ಪಿಂಗ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ
ಶೃಂಗಸಭೆಯ ಅಂತಿಮ ಹಂತದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಚರ್ಚೆಗಳ ಫಲಿತಾಂಶಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕುರಿತು ನಾಯಕರು ಚರ್ಚಿಸಲಿದ್ದಾರೆ. ಬಳಿಕ ಜಾಗತಿಕ ನಾಯಕರನ್ನು ಮೋದಿ ಬೀಳ್ಕೊಡಲಿದ್ದಾರೆ.

ಇಂದು ಮೋದಿ 7 ಮಹತ್ವದ ದ್ವಿಪಕ್ಷೀಯ ಸಭೆಗಳು
ಶೃಂಗಸಭೆಯ ಅಂತಿಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಕಝಕಿಸ್ತಾನ – ಅಧ್ಯಕ್ಷ ಕಾಸಿಂ-ಜೊಮಾರ್ಟ್ ಟೊಕಾಯೆವ್
ಫಿಲಿಪ್ಪೀನ್ಸ್ – ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್
ಈಜಿಪ್ಟ್ – ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ
ದಕ್ಷಿಣ ಆಫ್ರಿಕಾ – ಅಧ್ಯಕ್ಷ ಸಿರಿಲ್ ರಾಮಫೋಸಾ
ಬುರುಂಡಿ – ಅಧ್ಯಕ್ಷ ಎವರಿಸ್ಟೆ ನ್ದಾಯಿಶಿಮಿಯೆ
ನೈಜೀರಿಯಾ – ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ
ಉಗಾಂಡಾ – ಉಪಾಧ್ಯಕ್ಷ ಜೆಸ್ಸಿಕಾ ಅಲುಪೊ ಜೊತೆಗೆ ಸಭೆ ನಡೆಸಲಿದ್ದಾರೆ.
ಈ ಮಾತುಕತೆಗಳಲ್ಲಿ ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣಾ ಸಹಕಾರ, ಸಂಪರ್ಕ, ಖನಿಜ ಸಂಪನ್ಮೂಲಗಳು ಹಾಗೂ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳು ಪ್ರಮುಖ ವಿಷಯಗಳಾಗುವ ಸಾಧ್ಯತೆಯಿದೆ.

