ಗಣೇಶ ಹಬ್ಬ ಬಂತೆಂದರೆ ಸಾಕು, ಎಲ್ಲೆಡೆ ನೆನಪಾಗುವುದು ಸಿಹಿ ಮೋದಕ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮೋದಕಕ್ಕಿಂತಲೂ ಮಿಗಿಲಾಗಿ ಕಳೆಗಟ್ಟುವುದು ಅಲ್ಲಿನ ವಿಶಿಷ್ಟ, ಸಾಂಪ್ರದಾಯಿಕ ನೈವೇದ್ಯಗಳು. ಗಣಪನಿಗೆ ಅತ್ಯಂತ ಪ್ರಿಯವೆನ್ನಲಾದ ಕಡುಬು, ಚೌತಿ ಉಂಡೆ ಮತ್ತು ಹೂರಣದ ಕಡುಬುಗಳು ಈ ಭಾಗದ ಪ್ರತಿ ಮನೆಯಲ್ಲೂ ಘಮಘಮಿಸುತ್ತವೆ.
ಉತ್ತರ ಕರ್ನಾಟಕ ಶೈಲಿಯ ಹುರಿದ ಗೋಧಿ ಹಿಟ್ಟಿನ ಕಡುಬು:
ಉತ್ತರ ಕರ್ನಾಟಕದಲ್ಲಿ ಗಣೇಶನಿಗೆ ಗರಿಗರಿಯಾದ ಹುರಿದ ಕಡುಬು ಅರ್ಪಿಸುವುದು ಸಂಪ್ರದಾಯ.
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು (ಅಥವಾ ಚಿರೋಟಿ ರವೆ), ಬೆಲ್ಲ, ಹಸಿ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಮತ್ತು ಎಣ್ಣೆ/ತುಪ್ಪ
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಹಸಿ ಕೊಬ್ಬರಿ ತುರಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲ ಕರಗುವವರೆಗೆ ಹುರಿದುಕೊಳ್ಳಿ. ನಂತರ ಅದಕ್ಕೆ ಹುರಿದ ಗಸಗಸೆ ಹಾಗೂ ಏಲಕ್ಕಿ ಪುಡಿ ಬೆರೆಸಿ ಹೂರಣ ಸಿದ್ಧಪಡಿಸಿಡಿ. ಗೋಧಿ ಹಿಟ್ಟಿಗೆ ಚಿಟಿಕೆ ಉಪ್ಪು ಮತ್ತು ಸ್ವಲ್ಪ ಕಾದ ಎಣ್ಣೆ ಸೇರಿಸಿ, ನೀರು ಹಾಕಿ ಗಟ್ಟಿಯಾಗಿ ನಾದಿಕೊಳ್ಳಿ.
ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಪೂರಿಯಂತೆ ಲಟ್ಟಿಸಿ, ಅದರ ಮಧ್ಯದಲ್ಲಿ ಹೂರಣ ತುಂಬಿ ಅರ್ಧಚಂದ್ರಾಕಾರವಾಗಿ ಮಡಚಿ ಅಂಚುಗಳನ್ನು ಕೂಡಿಸಿಕೊಳ್ಳಬೇಕು. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ಕಡುಬು ಸವಿಯಲು ಸಿದ್ಧ.

ಶೇಂಗಾ-ಹುರಿಗಡಲೆ ಚೌತಿ ಉಂಡೆ:
ಗಣೇಶನಿಗೆ ಉಂಡೆಗಳೆಂದರೆ ಬಲು ಪ್ರೀತಿ. ಉತ್ತರ ಕರ್ನಾಟಕದಲ್ಲಿ ಹಬ್ಬಕ್ಕೆಂದೇ ಮಾಡುವ ಪೌಷ್ಟಿಕ ಹಾಗೂ ಪ್ರಸಾದವಿದು.
ಬೇಕಾಗುವ ಸಾಮಗ್ರಿಗಳು: ಹುರಿದ ಶೇಂಗಾ, ಹುರಿಗಡಲೆ (ಪುಠಾಣಿ), ಬೆಲ್ಲದ ಪುಡಿ, ತುಪ್ಪ ಮತ್ತು ಏಲಕ್ಕಿ ಪುಡಿ.
ಮಾಡುವ ವಿಧಾನ:
ಹುರಿದ ಶೇಂಗಾದ ಸಿಪ್ಪೆ ತೆಗೆದು, ಹುರಿಗಡಲೆಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ತರಿತರಿಯಾಗಿ ಪುಡಿಮಾಡಿಕೊಳ್ಳಿ. ಅದೇ ಜಾರಿಗೆ ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಸೇರಿಸಿ ಮತ್ತೊಮ್ಮೆ ತಿರುಗಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪಾತ್ರೆಗೆ ಹಾಕಿ, ಬಿಸಿ ಮಾಡಿದ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಕಲಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿದರೆ ರುಚಿಕರವಾದ ಪ್ರಸಾದದ ಉಂಡೆ ಸಿದ್ಧ.
ಹಬ್ಬದ ದಿನಗಳಲ್ಲಿ ಈ ನೈವೇದ್ಯಗಳನ್ನು ತಯಾರಿಸಿ ಗಣೇಶನಿಗೆ ಭಕ್ತಿಯಿಂದ ಅರ್ಪಿಸುವುದು ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ತಲೆಮಾರುಗಳಿಂದ ನಡೆದುಬಂದಿರುವ ಭಕ್ತಿಭಾವದ ಸಂಪ್ರದಾಯ.


