– ಅಪಾಯ ಮಟ್ಟ ಮೀರಿದ ಗಂಗಾ, ಕೋಸಿ, ಗಂಡಕ್ ನದಿಗಳು
ಪಾಟ್ನಾ: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ (Bihar Flood Situation) ಮತ್ತಷ್ಟು ಗಂಭೀರವಾಗಿದ್ದು, 15 ಜಿಲ್ಲೆಗಳ 47.33 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿರುವುದು ವರದಿಗಳಿಂದ ತಿಳಿದುಬಂದಿದೆ.
ಗಂಗಾ ಸೇರಿದಂತೆ ಕೋಸಿ, ಗಂಡಕ್ ಹಾಗೂ ಹಲವು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ಮಟ್ಟ ಏರಿಕೆ ಆಗಿರುವುದರಿಂದ ಹಲವು ಪ್ರದೇಶಗಳಲ್ಲಿ ಭೂ ಸವೆತ (ಮಣ್ಣಿನ ಸವಕಳಿ) ಉಂಟಾಗಿದ್ದು, ಕೆಲವೆಡೆ ಪ್ರವಾಹ ತಡೆಗೋಡೆಗಳು ಒಡೆದಿವೆ. ಭಗಲ್ಪುರ (Bhagalpur) ಜಿಲ್ಲೆಯಲ್ಲಿ ಕನಿಷ್ಠ 4 ಕಡೆ ತಡೆಗೋಡೆ ಒಡೆದಿರುವುದಾಗಿ ವರದಿಯಾಗಿದೆ. ಕೆಲವು ಕಡೆ ದುರಸ್ತಿ ಪೂರ್ಣಗೊಂಡಿದ್ದು, ಉಳಿದ ಪ್ರದೇಶಗಳಲ್ಲಿ ದುರಸ್ತಿ ಮತ್ತು ಬಲಪಡಿಸುವ ಕಾರ್ಯ ಮುಂದುವರಿದಿದೆ.

ಗೋಪಾಲ್ಪುರದ ಬ್ರಹ್ಮೋತ್ತರ ಅಣೆಕಟ್ಟಿನಲ್ಲಿ ಉಂಟಾಗಿದ್ದ ಒಡೆಯುವಿಕೆಯನ್ನು ಜಲಸಂಪನ್ಮೂಲ ಇಲಾಖೆ ಹಾಗೂ ಸ್ಥಳೀಯರ ಸಹಾಯದಿಂದ ನಿಯಂತ್ರಿಸಲಾಗಿದೆ. ರಂಗ್ರಾ ಪ್ರದೇಶದ ಧೋಬನಿಯಾ ಜಮೀನ್ದಾರಿ ಅಣೆಕಟ್ಟಿನಲ್ಲಿ ಸುಮಾರು 20 ಅಡಿ ಕೊಚ್ಚಿಹೋಗಿದ್ದು, ಪ್ರವಾಹದ ನೀರು ರಸ್ತೆಗೆ ನುಗ್ಗಿದೆ.
ಸ್ಥಳದಲ್ಲಿ ಬಿದಿರು ಪೈಲಿಂಗ್, ಮರಳು ಚೀಲಗಳ ಅಳವಡಿಕೆ ಹಾಗೂ ಪ್ಲಾಸ್ಟಿಕ್ ಶೀಟ್ಗಳ ಬಳಕೆಯ ಮೂಲಕ ನೀರು ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಲ್ಬಲಿಯಾ ನದಿಯ ಧೋಬನಿಯಾ ಅಣೆಕಟ್ಟು ಮತ್ತು ಬನಿಯಾ ಬೈಸಿ ಪಂಚಾಯತ್ನ ಬುದ್ಧಿಯಾ ಅಣೆಕಟ್ಟಿನಲ್ಲೂ ನೀರು ಒಡೆಯುವಿಕೆ ಕಂಡುಬರುತ್ತಿದೆ ಎಂದು ಹೇಳಲಾಗ್ತಿದೆ.

