– 2020ರ ಗಲ್ವಾನ್ ಘರ್ಷಣೆಯ ಬಳಿಕ ಭಾರತಕ್ಕೆ ಭೇಟಿ ನೀಡಿದ ಜಿನ್ಪಿಂಗ್
ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪಾಲ್ಗೊಳ್ಳಲು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಅವರು ಶನಿವಾರ ನಸುಕಿನ ಜಾವ ನವದೆಹಲಿಗೆ ಆಗಮಿಸಿದ್ದಾರೆ.
2020ರ ಗಲ್ವಾನ್ ಘರ್ಷಣೆಯ ಬಳಿಕ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ (India) ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ಮಾತುಕತೆಗೆ ಈ ಭೇಟಿ ವೇದಿಕೆ ಒದಗಿಸಿದೆ.
ಜಾಗತಿಕ ಮಟ್ಟದಲ್ಲಿ ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ನ ಸಂಘರ್ಷಗಳು, ವ್ಯಾಪಾರ ಉದ್ವಿಗ್ನತೆ ಹಾಗೂ ಇಂಧನ ಭದ್ರತೆ ಸೇರಿದಂತೆ ಹಲವು ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿ ಜಿನ್ಪಿಂಗ್ ಅವರ ಭಾರತ ಭೇಟಿ ಭಾರೀ ಕುತೂಹಲ ಮೂಡಿಸಿದೆ. 11 ಸದಸ್ಯ ರಾಷ್ಟ್ರಗಳ ಬ್ರಿಕ್ಸ್ ಒಕ್ಕೂಟದ 2 ದಿನಗಳ ಶೃಂಗಸಭೆಯಲ್ಲಿ ಈ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

ಜಿನ್ಪಿಂಗ್-ಮೋದಿ ಭೇಟಿ ಮೇಲೆ ಎಲ್ಲರ ಕಣ್ಣು
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಶನಿವಾರ ಶೃಂಗಸಭೆಯ ಸಂದರ್ಭದಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ.
2020ರಲ್ಲಿ ಹಿಮಾಲಯದ ವಿವಾದಿತ ಗಡಿಯಲ್ಲಿ ನಡೆದ ಸೇನಾ ಘರ್ಷಣೆಯ ಬಳಿಕ ಹಲವು ವರ್ಷಗಳಿಂದ ಉದ್ವಿಗ್ನವಾಗಿರುವ ಭಾರತ-ಚೀನಾ ಸಂಬಂಧಗಳನ್ನ ಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಈ ಭೇಟಿ ಅತ್ಯಂತ ಕುತೂಹಲದಿಂದ ಕೂಡಿದೆ.
ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಉಭಯ ದೇಶಗಳು ಹಂತಹಂತವಾಗಿ ಹಲವು ಕ್ರಮಗಳನ್ನು ಕೈಗೊಂಡಿವೆ. ವಿಮಾನ ಸೇವೆಗಳನ್ನು ಪುನರಾರಂಭಿಸುವುದು, ವೀಸಾ ವ್ಯವಸ್ಥೆ ಸರಳಗೊಳಿಸುವುದು ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕಗಳನ್ನ ಹೆಚ್ಚಿಸುವುದು ಇದರಲ್ಲಿ ಸೇರಿವೆ. ಆದ್ರೆ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಸುಮಾರು 3,500 ಕಿಲೋಮೀಟರ್ ಉದ್ದದ ಗಡಿಯಲ್ಲಿ ಎರಡೂ ದೇಶಗಳು ಗಣನೀಯ ಪ್ರಮಾಣದ ಸೇನಾ ನಿಯೋಜನೆ ಮುಂದುವರಿಸಿವೆ.

ಜಿನ್ಪಿಂಗ್ ಅವರ ಭಾರತ ಆಗಮನಕ್ಕೂ ಮುನ್ನ ಚೀನಾದ ಭಾರತದ ರಾಯಭಾರಿ ಝು ಫೆಹೋಂಗ್ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಬೀಜಿಂಗ್ ನವದೆಹಲಿಯೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಹೇಳಿದ್ದರು.
ಹೆಚ್ಚಿನ ಮಾತುಕತೆಗೆ ಚೀನಾ ಕರೆ
ಮೋದಿ ಮತ್ತು ಕ್ಸಿ ಅವರ ಕಾರ್ಯತಂತ್ರದ ಮಾರ್ಗದರ್ಶನದಂತೆ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲಿದೆ. ಉಭಯ ದೇಶಗಳು ಸಂವಹನ ಹೆಚ್ಚಿಸಿ, ಸಹಕಾರ ವೃದ್ಧಿಸಿ ಹಾಗೂ ಭಿನ್ನಾಭಿಪ್ರಾಯಗಳನ್ನ ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಝು ಫೆಹೋಂಗ್ ಕರೆ ನೀಡಿದ್ದಾರೆ.

