– ತಕ್ಷಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿಶೇಷ ಹಿರಿಯ ನ್ಯಾಯವಾದಿಯನ್ನು ನೇಮಿಸಬೇಕು
ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ ಎಂಬ ಭಾವನೆ ರೈತರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಕೂಡಲೇ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕ ನಿರಂತರವಾಗಿ ಸಂಕಷ್ಟ ಎದುರಿಸುತ್ತಿದೆ. ನಮ್ಮ ಸಮಸ್ಯೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಪರಿಣಾಮಕಾರಿಯಾಗಿ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಧಿಕಾರಿಗಳು ಏನೇ ಹೇಳಿದರೂ ವಾಸ್ತವ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಮನವರಿಕೆ ಮಾಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಆದೇಶದಂತೆ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ. ಇದರಿಂದ ಸುಮಾರು 7.5 ಟಿಎಂಸಿ ನೀರು ರಾಜ್ಯದಿಂದ ಹೊರಹೋಗಲಿದೆ. ಈಗಾಗಲೇ ಕಬಿನಿ ಜಲಾಶಯದ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ. ಕೆಆರ್‌ಎಸ್‌ನಿಂದಲೂ ಪ್ರತಿದಿನ ಸುಮಾರು 5,000ರಿಂದ 6,000 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದ್ದು, ಪ್ರತಿದಿನ ಸುಮಾರು ಅರ್ಧ ಟಿಎಂಸಿ ನೀರು ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಕೇಸ್ – ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ
ಮುಂದಿನ ದಿನಗಳಲ್ಲಿ ಮಳೆಯಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.
ಪ್ರತಿ ಬಾರಿ ತಮಿಳುನಾಡಿನ ಅರ್ಜಿಗೆ ಉತ್ತರಿಸುವ ರೆಸ್ಪಾಂಡೆಂಟ್ ಆಗಿರುವ ಬದಲು ಕರ್ನಾಟಕವೇ ಪಿಟಿಷನರ್ ಆಗಬೇಕು. ಕೇವಲ ಅಂಕಿ-ಅಂಶಗಳನ್ನು ಮಾತ್ರವಲ್ಲದೆ, ನೀರು ಬಿಡುವುದರಿಂದ ರಾಜ್ಯದ ರೈತರು ಹಾಗೂ ಕುಡಿಯುವ ನೀರಿಗೆ ಎದುರಾಗುವ ಸಮಸ್ಯೆಗಳನ್ನೂ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶೇಷ ಹಿರಿಯ ನ್ಯಾಯವಾದಿಯನ್ನು ನೇಮಿಸಬೇಕು. ಈಗಿರುವ ವ್ಯವಸ್ಥೆಯಿಂದ ರಾಜ್ಯಕ್ಕೆ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿ ಕೂಡಲೇ ಈ ವಿಚಾರದಲ್ಲಿ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂತ್ರಿಮಂಡಲ ರಚನೆ ಸೇರಿದಂತೆ ಹಲವು ವಿಚಾರಗಳಿಗೆ ದೆಹಲಿಗೆ ತೆರಳುವ ಮುಖ್ಯಮಂತ್ರಿ, ಕಾವೇರಿ ವಿಚಾರದಲ್ಲೂ ದೆಹಲಿಗೆ ತೆರಳಿ ಕಾನೂನು ಹಾಗೂ ತಾಂತ್ರಿಕ ತಜ್ಞರೊಂದಿಗೆ ಬದಲಾಗಿರುವ ಪರಿಸ್ಥಿತಿ ಕುರಿತು ಚರ್ಚಿಸಬೇಕು. ನ್ಯಾಯಾಂಗ ತಂಡಕ್ಕೆ ಹೊಸ ಶಕ್ತಿ ತುಂಬಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿಗೆ ಸುತ್ತಿಕೊಳ್ಳುತ್ತಾ ರುವಾಂಡಾ ರಾಡಿ?
ಇದನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶ ಮಾತ್ರವಲ್ಲದೆ ಬೆಂಗಳೂರು ಕೂಡ ನೀರಿನ ಹಾಹಾಕಾರ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಜನ ಶಾಪ ಹಾಕುತ್ತಾರೆ
ತಮಿಳುನಾಡು ಮೆಟ್ಟೂರು ಜಲಾಶಯದಿಂದ ಒಟ್ಟು 40 ಟಿಎಂಸಿ ಹಾಗೂ ಒಟ್ಟು 80 ಟಿಎಂಸಿ ನೀರು ಬಿಡುವ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಅಲ್ಲಿನ ಸಚಿವರು ಮೂರನೇ ಬೆಳೆಗೆ ನೀರು ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ.
ತಮಿಳುನಾಡಿನ ಬೆಳೆಗಳಿಗಾಗಿ ನೀರು ಕೇಳಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಜನರ ಕುಡಿಯುವ ನೀರು ಹಾಗೂ ರೈತರ ಬದುಕಿನ ಪ್ರಶ್ನೆಯಾಗಿದೆ. ಈ ಕಟುಸತ್ಯವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ರಾಜ್ಯದ ಜನರ ಸಂಕಷ್ಟವನ್ನು ಪರಿಹರಿಸಬೇಕು ಎಂದು ಅವರು ಹೇಳಿದ್ದಾರೆ.ಇದನ್ನೂ ಓದಿ: 8 ತಿಂಗಳ ಹಿಂದೆ ಕಾಣೆಯಾಗಿದ್ದ ಬೆಂಗ್ಳೂರಿನ ಪಿಯು ವಿದ್ಯಾರ್ಥಿನಿಯರು ಪತ್ತೆ – ಒಬ್ಬಳು ಗರ್ಭಿಣಿ
ಇಲ್ಲವಾದರೆ ಈ ಭಾಗದ ಜನರು ಸರ್ಕಾರಕ್ಕೆ ಶಾಪ ಹಾಕುವುದಷ್ಟೇ ಅಲ್ಲ, ಕಳೆದ ಬಾರಿ ಬೆಂಬಲ ನೀಡಿದ ಜನರ ಬೆಂಬಲವೂ ಮುಂದಿನ ದಿನಗಳಲ್ಲಿ ಶೂನ್ಯವಾಗಬಹುದು ಎಂದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
