ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರಿಗೆ ರುವಾಂಡ (Rwanda) ರಾಡಿ ಸುತ್ತಿಕೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ.
ಆಫ್ರಿಕಾ (Africa) ಖಂಡದ ದೇಶವಾದ ರುವಾಂಡಾದಲ್ಲಿ ‘ಇಂಡಿಯನ್ ಸ್ಪೋರ್ಟ್ಸ್ ಸ್ಕೂಲ್’ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಅದಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ ಎಂದು ಹಿಂದೆ ಸತೀಶ್ ಜಾರಕಿಹೊಳಿ ಪ್ರಕಟಿಸಿದ್ದರು.
ಸೆಪ್ಟೆಂಬರ್ 2024 ರಲ್ಲಿ ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದ್ದ ‘ಬೆಳಗಾವಿ-ರುವಾಂಡಾ ಬಿಸಿನೆಸ್ ಮೀಟ್’ನಲ್ಲಿ ಮಾತನಾಡಿದ್ದ ಅವರು ನಾನು ಈ ಹಿಂದೆ 3-4 ಬಾರಿ ರುವಾಂಡಾಗೆ ಭೇಟಿ ನೀಡಿದ್ದೇನೆ. ಅಲ್ಲಿನ ಭೇಟಿಯ ನಂತರ ಆಫ್ರಿಕನ್ ದೇಶಗಳ ಬಗೆಗಿನ ನನ್ನ ದೃಷ್ಟಿಕೋನವೇ ಬದಲಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಜಾರಕಿಹೊಳಿಗೆ ಇಡಿ ಶಾಕ್| ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿ – ಪುತ್ರ, ಸಹೋದರಿ ನಿರ್ದೇಶಕಿ!
ರುವಾಂಡಾ ಅತ್ಯಂತ ಪ್ರಗತಿಪರ ರಾಷ್ಟ್ರವಾಗಿದ್ದು, ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಲ್ಲಿ ಮಹಿಳೆಯರು ಮಧ್ಯರಾತ್ರಿಯಲ್ಲೂ ನಿರ್ಭಯವಾಗಿ ಓಡಾಡಬಹುದು. ಭಾರತದ ಹಲವು ರೈತರು ಅಲ್ಲಿ ನೆಲೆಸಿ ಭತ್ತದ ಕೃಷಿ ಮಾಡುತ್ತಿದ್ದು, ಭೇಟಿಯ ವೇಳೆ ಅವರನ್ನು ಭೇಟಿ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಅಲ್ಲಿ ‘ಇಂಡಿಯನ್ ಸ್ಪೋರ್ಟ್ಸ್ ಸ್ಕೂಲ್’ ತೆರೆಯಲು ನಿರ್ಧರಿಸಿದ್ದೇನೆ. ಅಲ್ಲದೆ ರುವಾಂಡಾದಲ್ಲಿ ಉದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂದು ಸ್ಥಳೀಯ ಉದ್ಯಮಿಗಳಿಗೆ ಕರೆ ನೀಡಿದ್ದರು.
ಕಳೆದ ತಿಂಗಳು ಬಂಡವಾಳ ಹೂಡಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶ್ ಜಾರಕಿಹೊಳಿ ಭಾಗವಹಿಸಿದ್ದರು. ರವಾಂಡಾ ಹೈಕಮಿಷನರ್ ಕಚೇರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಇಂದು ಸತೀಶ್ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಶೋಧ ನಡೆಸುತ್ತಿದೆ.
