ಮಡಿಕೇರಿ: ಕಾಫಿ, ಕರಿಮೆಣಸು, ಏಲಕ್ಕಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳಿಗೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಇದೀಗ ವಿದೇಶಿ ಹಾಗೂ ಹೆಚ್ಚು ಮೌಲ್ಯದ ಹಣ್ಣುಗಳ ಕೃಷಿಯತ್ತಲೂ ಗಮನ ಹರಿಸಲಾಗುತ್ತಿದೆ. ಕೊಡಗಿನ ಹವಾಮಾನವು ಲಾಂಗಾನ್, ರಾಂಬುಟಾನ್, ಲಿಚ್ಚಿ, ಮ್ಯಾಂಗೋಸ್ಟೀನ್‌ನಂತಹ ಹಣ್ಣುಗಳ ಬೆಳೆಗೆ ಪೂರಕವಾಗಿದ್ದು, ರೈತರಿಗೆ ಇದು ಪರ್ಯಾಯ ಆದಾಯದ ಮೂಲವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವಿದೇಶಿ ಹಣ್ಣುಗಳ ಕೃಷಿ ಕುರಿತು ಹಲವು ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿದೆ. ವಿವಿಧ ಹಣ್ಣುಗಳ ತಳಿಗಳ ಅಭಿವೃದ್ಧಿ, ಕೃಷಿ ಪದ್ಧತಿ ಹಾಗೂ ಫಸಲಿನ ಕುರಿತು ಇಲ್ಲಿ ಅಧ್ಯಯನ ನಡೆಯುತ್ತಿದೆ.

ಸಾಂಪ್ರದಾಯಿಕ ಬೆಳೆಗಳ ನಡುವೆ ಹೊಸ ಪ್ರಯತ್ನ
ಕಾಫಿ, ಕರಿಮೆಣಸು ಹಾಗೂ ಏಲಕ್ಕಿ ಕೊಡಗಿನ ಪ್ರಮುಖ ಕೃಷಿ ಬೆಳೆಗಳು. ಆದರೆ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಏರಿಳಿತದಿಂದಾಗಿ ಸಾಂಪ್ರದಾಯಿಕ ಬೆಳೆಗಳನ್ನೇ ಅವಲಂಬಿಸಿರುವ ರೈತರು ಕೆಲವೊಮ್ಮೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಪರ್ಯಾಯ ಬೆಳೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೊಡಗಿನಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಿವೆ.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಲಾಂಗಾನ್, ರಾಂಬುಟಾನ್, ಲಿಚ್ಚಿ, ಮ್ಯಾಂಗೋಸ್ಟೀನ್ ಸೇರಿದಂತೆ ವಿವಿಧ ಹಣ್ಣುಗಳ ಕೃಷಿ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.

ಕೊಡಗಿನ ಹವಾಮಾನದಲ್ಲಿ ಉತ್ತಮ ಫ್ರೂಟಿಂಗ್
ಕೊಡಗಿನ ಹವಾಮಾನದಲ್ಲಿ ಈ ಹಣ್ಣುಗಳಿಗೆ ಉತ್ತಮ ಫ್ರೂಟಿಂಗ್ ಕಂಡುಬರುತ್ತಿರುವುದು ವಿಶೇಷ. ಸದ್ಯ ಲಾಂಗಾನ್, ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಗಿಡಗಳು ಫಸಲು ನೀಡುತ್ತಿವೆ. 4 ರಿಂದ 6 ವರ್ಷ ವಯಸ್ಸಿನ ಗಿಡಗಳಿಂದ ಸುಮಾರು 40 ರಿಂದ 50 ಕೆ.ಜಿ.ವರೆಗೆ ಫಸಲು ಪಡೆಯುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿಯೂ ಈ ಹಣ್ಣುಗಳಿಗೆ ಉತ್ತಮ ಬೆಲೆ ದೊರೆಯುವ ಅವಕಾಶವಿದೆ.
ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಲಾಂಗಾನ್, ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್‌ನಂತಹ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಹೀಗಾಗಿ ಕಾಫಿ ಬೆಳೆಯ ಪ್ರಮುಖ ಅವಧಿಗೆ ಹೊರತಾದ ಸಮಯದಲ್ಲಿಯೂ ರೈತರಿಗೆ ಈ ಹಣ್ಣುಗಳಿಂದ ಆದಾಯ ಗಳಿಸುವ ಅವಕಾಶ ಸಿಗಬಹುದು.

ಕಾಫಿ ತೋಟದಲ್ಲೇ ಮಿಶ್ರ ಬೆಳೆಗೆ ಅವಕಾಶ
ಕಾಫಿ ತೋಟಗಳ ನಡುವೆ ಮಿಶ್ರ ಬೆಳೆಯಾಗಿ ಇಂತಹ ಹಣ್ಣುಗಳನ್ನು ಬೆಳೆಸುವುದರಿಂದ ಒಂದೇ ಬೆಳೆಯ ಮೇಲೆ ರೈತರು ಅವಲಂಬಿತರಾಗುವುದನ್ನ ಕಡಿಮೆ ಮಾಡಬಹುದು. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಭತ್ತದಂತಹ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ವಿದೇಶಿ ಹಾಗೂ ಹೆಚ್ಚು ಮೌಲ್ಯದ ಹಣ್ಣುಗಳ ಕೃಷಿಗೂ ಕೊಡಗಿನಲ್ಲಿ ಉತ್ತಮ ಅವಕಾಶವಿದೆ. ಕೊಡಗಿನ ಹವಾಮಾನವು ಹಲವು ವಿದೇಶಿ ಹಣ್ಣುಗಳ ಬೆಳೆಗೆ ಅನುಕೂಲಕರವಾಗಿದ್ದು, ರೈತರು ತಜ್ಞರಿಂದ ಸೂಕ್ತ ಮಾಹಿತಿ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಲಿಚ್ಚಿಯಲ್ಲಿ ಆಫ್‌ಸೀಸನ್ ಫಸಲು ಪಡೆಯುವ ಸಾಧ್ಯತೆಯೂ ಇದೆ.
ಪರ್ಯಾಯ ಬೆಳೆಗಳಿಂದ ಆದಾಯ ಹೆಚ್ಚಳ
ಕೊಡಗಿನ ಕೃಷಿ ಪ್ರದೇಶದ ಬಹುಪಾಲು ಕಾಫಿ ಮತ್ತು ಕರಿಮೆಣಸಿನಂತಹ ಸಾಂಪ್ರದಾಯಿಕ ಬೆಳೆಗಳಿಂದ ಆವೃತವಾಗಿದೆ. ಇದರ ಜೊತೆಗೆ ಶೇ. 10ರಿಂದ 20ರಷ್ಟು ಪ್ರದೇಶದಲ್ಲಾದರೂ ಪರ್ಯಾಯ ಹಾಗೂ ಹೆಚ್ಚು ಮೌಲ್ಯದ ಹಣ್ಣುಗಳನ್ನು ಬೆಳೆಯುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು ಎಂಬುದು ಜಿಲ್ಲೆಯ ಕೃಷಿಕರ ಅಭಿಪ್ರಾಯವಾಗಿದೆ.
