ಚೆನ್ನೈ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಬೇಡಿ. ಬಳಸಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಜೋಸೆಫ್ ವಿಜಯ್ (CM Joseph Vijay) ನಟಿ ತ್ರಿಷಾ ವಿರುದ್ಧ ಡಬಲ್ ಮೀನಿಂಗ್ ಮಾತನಾಡಿದ್ದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ (Udhayanidhi Stalin) ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜಕೀಯ ಟೀಕೆ ಮಾಡಿ. ಸರ್ಕಾರದ ಯೋಜನೆಗಳನ್ನು ಟೀಕಿಸಿ. ಆದರೆ ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಮಹಿಳೆಯರ ನಿಂದನೆ ಬೇಡ. ರಾಜಕೀಯ ಟೀಕೆ ಮಾಡುವಾಗ ಮಹಿಳೆಯರಿಗೆ ಅಗೌರವ ಬೇಡ. ಮಹಿಳೆಯನ್ನು ಗೌರವಿಸಿ. ಮಾನಹಾನಿಯಾಗುವಂತ ಹೇಳಿಕೆ ನೀಡಿದರೆ ಕಾನೂನು ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದು ಆಪ್ತರ ಬಂಗಲೆ ಜಟಾಪಟಿ| ಬಾಡಿಗೆ ಮನೆ ಸಿಕ್ಕಿದ ತಕ್ಷಣ ಸರ್ಕಾರಿ ಮನೆ ಖಾಲಿ ಮಾಡ್ತೇನೆ: ಮಹದೇವಪ್ಪ
ಈ ಹಿಂದೆ ಜಯಲಲಿತಾ ಅವರಿಗೆ ಅವಮಾನಿಸಿದ್ದ ಬಗ್ಗೆ ನೆನಪಸಿಕೊಂಡು ಮಾತನಾಡಿದ ಅವರು, ನನ್ನ ರಾಜಕೀಯ ಗೆಲುವಿನ ಹಿಂದಿನ ಪ್ರಮುಖ ಕಾರಣವೆಂದರೆ ಅದು ಮಹಿಳೆಯರು. ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಮಾತನಾಡುವುದನ್ನು ನಾನು ಸಹಿಸಲ್ಲ. ರಾಜಕೀಯದಲ್ಲಿ ಯಾರೂ ಯಾರನ್ನು ಬೇಕಾದರೂ ಟೀಕಿಸಬಹುದು. ಎಲ್ಲವನ್ನು ಜನ ನೋಡುತ್ತಿರುತ್ತಾರೆ. ಆದರೆ ರಾಜಕೀಯ ಹೆಸರಿನಲ್ಲಿ ನಾವು ನಮ್ಮ ಜನರನ್ನು, ಮಹಿಳೆಯರನ್ನು ವೈಯಕ್ತಿಕವಾಗಿ, ಕೀಳಾಗಿ ಟೀಕಿಸುವುದು ಸರಿಯಲ್ಲ. ಹಾಗೇ ಮಾತನಾಡಬೇಡಿ ಎಂದು ವಿನಂತಿಸಿದ್ದಾರೆ.
ಏನಿದು ವಿವಾದ?
ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಎಂಬುದು ಅಷ್ಟೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದರು.ಇದನ್ನೂ ಓದಿ: ರಾಜ್ಯದ 175 ತಾಲೂಕುಗಳನ್ನ ಬರ ಘೋಷಣೆ ಮಾಡಿ: ಆರ್. ಅಶೋಕ್ ಆಗ್ರಹ
ಇದೇ ವೇಳೆ ಜನಸಮೂಹದಿಂದ ತ್ರಿಷಾ….ತ್ರಿಷಾ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ನಗುಮುಖದೊಂದಿಗೆ ತಮಿಳಿನಲ್ಲಿ ದ್ವಂದ್ವಾರ್ಥ ಬರುವ ರೀತಿಯಲ್ಲಿ, ಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕು ಎಂದು ಹೇಳಿದ್ದರು. ಈ ಮಾತು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು.
ಇದೇ ವಿಷಯವಾಗಿ ಅರೆಸ್ಟ್ ಆಗಿದ್ದ ಅವರು ಸತತ ಒಂದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು. ಬಳಿಕ ಮದ್ರಾಸ್ ಹೈಕೋರ್ಟ್ ಆದೇಶದಂತೆ ಅದೇ ದಿನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದರು.ಇದನ್ನೂ ಓದಿ: ಬರ ಪಟ್ಟಿಗೆ ನನ್ನ ಕ್ಷೇತ್ರ ಸೇರಿಸದಿದ್ರೆ ಹೋರಾಟ: ಶರಣಗೌಡ ಕಂದಕೂರ್
