– ಕನ್ನಡಿಗರ ಪತ್ತೆಗಾಗಿ ಡಿಎನ್‌ಎ ಮೊರೆ
ಕಠ್ಮಂಡು/ಬೆಂಗಳೂರು: ಎರಡು ವಾರಗಳ ಹಿಂದೆ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ನೆರೆಯ ನೇಪಾಳ ತತ್ತರಿಸಿ ಹೋಗಿತ್ತು. ಈವರೆಗೂ ಸುಮಾರು 1,344 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಸಿಗರ ಸ್ವರ್ಗದಂತಿದ್ದ ನೇಪಾಳ ಅಕ್ಷರಶಃ ಸ್ಮಶಾನವಾಗಿದೆ. ಕೆಸರಿನ ಪ್ರವಾಹಕ್ಕೆ ನೇಪಾಳ (Nepal Flood) ನೆಲದಲ್ಲಿ ಶವಗಳು ಹುದುಗಿ ಹೋಗಿವೆ. ಕಾಲಿಟ್ಟ ಕಡೆಯಲ್ಲೆಲ್ಲ ಬರೀ ಶವಗಳೇ ಸಿಗುತ್ತಿವೆ.
ಇನ್ನೂ ನೇಪಾಳ ರಕ್ಕಸ ಪ್ರವಾಹದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದ್ದು, ಬರೋಬ್ಬರಿ 11 ದಿನಗಳ ಬಳಿಕ (ಚೀನಾ ಮೂಲದ) 64 ವರ್ಷದ ವೃದ್ಧೆಯನ್ನ ರಕ್ಷಿಸಲಾಗಿದೆ. ನುವಾಕೋಟ್‌ನ ಬೆತ್ರಾವತಿಯಲ್ಲಿ ಪ್ರವಾಹದ ಅವಶೇಷಗಳಡಿ ಸಿಲುಕಿದ್ದ ವೃದ್ದೆಯನ್ನ ರಕ್ಷಿಸಲಾಗಿದೆ. ವೃದ್ಧೆ ಸೇರಿ ಇಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಮೂವರು ಭಾರತೀಯರ ರಕ್ಷಣೆ
ನೇಪಾಳದ ತ್ರಿಶೂಲಿ ಬಜಾರ್ ಪ್ರದೇಶದಿಂದ 5 ವರ್ಷದ ಮಗು ಸೇರಿ ಮೂವರು ಭಾರತೀಯರ (Indians) ರಕ್ಷಣೆ ಮಾಡಲಾಗಿದೆ. ಇನ್ನೂ 275 ಭಾರತೀಯರು ನಾಪತ್ತೆ ಆಗಿದ್ದು, 169 ಭಾರತೀಯರನ್ನ ರಕ್ಷಿಸಿ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಕನ್ನಡಿಗರ ಪತ್ತೆಗಾಗಿ ಡಿಎನ್‌ಎ ಮೊರೆ
ಇನ್ನೂ ನೇಪಾಳಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಕನ್ನಡಿಗರು ಸಹ ನಾಪತ್ತೆ ಆಗಿದ್ದು, ಈವರೆಗೂ ಸುಳಿವು ಸಿಗುತ್ತಿಲ್ಲ. ಆತಂಕದಲ್ಲಿರುವ ಕುಟುಂಬ ಕಣ್ಣೀರಿಡುತ್ತಿದೆ. ಈ ಮಧ್ಯೆ ಸರ್ಕಾರ ಮಹತ್ವದ ತೀರ್ಮಾನ ಕೈಕೊಂಡಿದ್ದು, ನೇಪಾಳ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ರಾಜ್ಯ ಸರ್ಕಾರವು ಸಾಗರೋಪಾದಿಯಲ್ಲಿ ಡಿಎನ್‌ಎ ಮಾದರಿ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯನ್ನ ನೋಡೆಲ್ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ.
ನೇಪಾಳದಲ್ಲಿ ಕಣ್ಮರೆ ಆ ಕನ್ನಡಿಗರ ಗುರುತು ಪತ್ತೆ ಹಚ್ಚಲು ಡಿಎನ್‌ಇ ಪರೀಕ್ಷೆ ಮಾಡಲಾಗ್ತಿದೆ. ನೇಪಾಳದಲ್ಲಿ ಸದ್ಯ ಫೋಟೋ ಮತ್ತು ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್‌ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನ ಪರಿಶೀಲಿಸಲು ಸಂತ್ರಸ್ತರ ರಕ್ತಸಂಬಂಧಿಗಳ ಡಿಎನ್‌ಎ ಮಾದರಿ ಅಗತ್ಯವಿದೆ. ಹೀಗಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಡಿಎನ್‌ಎಗಾಗಿ ರಕ್ತಮಾದರಿ ಸಂಗ್ರಹಿಸಲಾಗ್ತಿದೆ.

ನೇಪಾಳದ ಪ್ರವಾಹದಲ್ಲಿ ಬೆಂಗಳೂರಿನ ವಿಜ್ಞಾನನಗರ ನಿವಾಸಿ ಪದ್ಮಾ ಮಹಾದೇವನ್ ನಾಪತ್ತೆ ಆಗಿದ್ದಾರೆ. ಹೀಗಾಗಿ ಇವರ ಪತ್ತೆಗಾಗಿ ಪದ್ಮಾ ಮಹಾದೇವನ್ ಸಹೋದರಿಯ ಬ್ಲಡ್ ಸ್ಯಾಪಲ್ ಸಂಗ್ರಹಿಸಲಾಗಿದೆ. ಅದೇ ರೀತಿ ಇಂದಿರಾನಗರದ ನಿವೃತ್ತ ಪ್ರಿನ್ಸಿಪಾಲ್ ರೆಮಾ ಕೋದಂಡರಾಮನ್ ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಇವರ ಸಂಬಂಧಿಕರ ರಕ್ತ ಮಾದರಿಯನ್ನೂ ಸಂಗ್ರಹಿಸಲಾಗಿದೆ.
ಡಿಎನ್‌ಎ ಪ್ರಕ್ರಿಯೆ ಬಗ್ಗೆ ಬೌರಿಂಗ್ ವಿಧಿವಿಜ್ಞಾನ ವಿಭಾಗದ ಪ್ರತಿಕ್ರಿಯಿಸಿದೆ. ನೇಪಾಳದಲ್ಲಿ ಕಣ್ಮರೆ ಆದವರ ಕುಟುಂಬಸ್ಥರ ಡಿಎನ್‌ಎ ಸಂಗ್ರಹಣೆಗೆ ಸೂಚನೆ ಬಂದಿದೆ. ಹೀಗಾಗಿ ಮೂವರು ಕುಟುಂಬಸ್ಥರ ರಕ್ತ ಸಂಗ್ರಹ ಮಾಡಿದ್ದೇವೆ. ನಂತರ ವರದಿಯನ್ನು ಕೊಡುತ್ತೇವೆ ಅಂತ ಹೇಳಿದ್ದಾರೆ.
