ದುಬೈ: ಇರಾನ್‌ನ(Iran) ಅತ್ಯಂತ ಮಹತ್ವದ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ(Kharg Island) ಸಮೀಪ, ಇರಾನಿಯನ್ ತೈಲ ಟ್ಯಾಂಕರ್(Iranian tanker) ಮೇಲೆ ಅಮೆರಿಕ ಪಡೆಗಳು(U.S. force) ದಾಳಿ ನಡೆಸಿವೆ.
ಖಾರ್ಗ್ ದ್ವೀಪದ ಲಂಗರು ಪ್ರದೇಶದಲ್ಲಿ ತೈಲವನ್ನು ಅನ್‌ಲೋಡ್ ಮಾಡುತ್ತಿದ್ದ ವೇಳೆ ಈ ಟ್ಯಾಂಕರ್‌ಗೆ ಅಮೆರಿಕದ 4 ಕ್ಷಿಪಣಿಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ. ದಾಳಿಯ ಬಳಿಕ ಬೃಹತ್ ಸ್ಫೋಟದ ಶಬ್ದ ಕೇಳಿಬಂದಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಟ್ಯಾಂಕರ್‌ನಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ.
ತೈಲ ಸಾಗಣೆಯ ಜಾಗತಿಕ ಜೀವಾಳವಾಗಿರುವ ಹಾರ್ಮುಜ್ ಜಲಸಂಧಿ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಉದ್ವಿಗ್ನತೆ ಹೆಚ್ಚಾಗಿದ್ದು, ಈ ದಾಳಿಯು ಅಮೆರಿಕ-ಇರಾನ್ ನಡುವಿನ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ದಾಳಿ ಕುರಿತು ಇರಾನ್ ಸರ್ಕಾರದಿಂದಾಗಲಿ ಅಥವಾ ಅಮೆರಿಕದ ಸೆಂಟ್ರಲ್ ಕಮಾಂಡ್‌ನಿಂದಾಗಲಿ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಇದನ್ನೂ ಓದಿ: ಸೌದಿಗೆ 47,245 ಕೋಟಿ ಮೌಲ್ಯದ ಬಾಂಬ್, ರಕ್ಷಣಾ ಸಲಕರಣೆ ಮಾರಾಟಕ್ಕೆ ಅಮೆರಿಕ ಒಪ್ಪಿಗೆ
ಒಪೆಕ್ (OPEC) ಒಕ್ಕೂಟದಲ್ಲಿ ಮೂರನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿರುವ ಇರಾನ್, ಯುದ್ಧ ಆರಂಭಕ್ಕೂ ಮುನ್ನ ತನ್ನ ಒಟ್ಟು ಕಚ್ಚಾ ತೈಲದ ಶೇ. 90 ರಷ್ಟನ್ನು ಖಾರ್ಗ್ ದ್ವೀಪದ ಮೂಲಕವೇ ರಫ್ತು ಮಾಡುತ್ತಿತ್ತು.
ಏಪ್ರಿಲ್ ಮಧ್ಯಭಾಗದಿಂದ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನದಿಂದಾಗಿ ತೈಲ ಸಾಗಣೆ ಈಗಾಗಲೇ ಭಾರೀ ಹೊಡೆತ ತಿಂದಿದೆ. ಇದೀಗ ಖಾರ್ಗ್ ದ್ವೀಪದ ಮೇಲೆಯೇ ದಾಳಿ ನಡೆದಿರುವುದು ಇರಾನ್‌ನ ತೈಲ ಉದ್ಯಮ ಹಾಗೂ ಆರ್ಥಿಕತೆಯ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನೂ ಓದಿ: ಬಡ್ಡಿದರ ಇಳಿಕೆಗೆ ಫೆಡರಲ್ ರಿಸರ್ವ್‌ಗೆ ಟ್ರಂಪ್ ಪಟ್ಟು- ಮತ್ತೆ ವ್ಯಾಪಾರ ಸಮರದ ಎಚ್ಚರಿಕೆ
