ಸನಾ: ದಕ್ಷಿಣ ಕೆಂಪು ಸಮುದ್ರದಲ್ಲಿರುವ ಜುಖಾರ್ ದ್ವೀಪದ ಬಳಿ, 14 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿದ್ದ ವಿಹಾರ ನೌಕೆಯೊಂದನ್ನು ಸೌದಿ ಅರೇಬಿಯಾ (Saudi Arabia) ಟಾರ್ಗೆಟ್ ಮಾಡಿದೆ ಎಂದು ಯೆಮೆನ್ನ ಹೌತಿ ಪಡೆಗಳು ಆರೋಪಿಸಿವೆ. ನೌಕೆಯಲ್ಲಿದ್ದ ಜನರನ್ನು ರಕ್ಷಿಸಲು ತಮ್ಮ ಪಡೆಗಳು ಪ್ರಯತ್ನಿಸುತ್ತಿದ್ದವು ಎಂದು ಹೌತಿಗಳು ತಿಳಿಸಿದ್ದಾರೆ.
ಹೌತಿ ಸೇನಾ ವಕ್ತಾರ ಯಾಹ್ಯಾ ಸರೀ ಅವರು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ‘ಪ್ರಾಥಮಿಕ ಮಾಹಿತಿಯ ಪ್ರಕಾರ, ಸೌದಿ ಶತ್ರುವು ಜುಖಾರ್ ದ್ವೀಪದ ಬಳಿ ಭಾರತೀಯ ಪ್ರಜೆಗಳಿರುವ (ಒಟ್ಟು 14 ಮಂದಿ) ಭಾರತೀಯ ನೌಕೆಯೊಂದನ್ನು ಗುರಿಯಾಗಿಸಿಕೊಂಡಿದೆ. ಯೆಮೆನ್ ಸಶಸ್ತ್ರ ಪಡೆಗಳು ಅವರನ್ನು ರಕ್ಷಿಸುತ್ತಿದ್ದು, ಈ ಕುರಿತ ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು. ಸೌದಿ ಶತ್ರುವು ನಡೆಸಿರುವ ಈ ಬೇಜವಾಬ್ದಾರಿ ಕೃತ್ಯವು ಕೆಂಪು ಸಮುದ್ರದಲ್ಲಿನ ಅಂತರರಾಷ್ಟ್ರೀಯ ನೌಕಾಯಾನಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಸೌದಿ ಶತ್ರುವಿನ ಇಂತಹ ಬೇಜವಾಬ್ದಾರಿ ಕ್ರಮಗಳನ್ನು ತಡೆಯಬೇಕು ಎಂದು ಸಾರೀ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: SSLC, PUC ಪಬ್ಲಿಕ್ ಪರೀಕ್ಷೆ ಮುಂದೂಡಿಕೆ ಸಾಧ್ಯತೆ
ಯೆಮೆನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಈ ವರದಿಗಳನ್ನು ಪರಿಶೀಲಿಸುತ್ತಿರುವುದಾಗಿಯೂ ಮತ್ತು ಅಲ್ಲಿರುವ 14 ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದಾಗಿಯೂ ತಿಳಿಸಿದೆ.
ಯೆಮೆನ್ ಕರಾವಳಿಯ ಸಮೀಪ ನೌಕೆಯೊಂದರಲ್ಲಿ 14 ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ ಘಟನೆಯ ಕುರಿತಾದ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಭಾರತೀಯ ಪ್ರಜೆಗಳ ಸುರಕ್ಷತೆ ಹಾಗೂ ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಿದ್ದೇವೆ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಇದನ್ನೂ ಓದಿ: Asian Para Games: ಆರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ
ಸೌದಿ ಅರೇಬಿಯಾದ ದಮ್ಮಾಮ್ನಲ್ಲಿರುವ ಕಿಂಗ್ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟ ಮರುದಿನವೇ ಈ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿಯೂ ಮೃತಪಟ್ಟಿದ್ದು, ಇಬ್ಬರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ.
