ನವದೆಹಲಿ: ಜಂತರ್ ಮಂತರ್ನಲ್ಲಿ(Jantar Mantar) ಜುಲೈ ತಿಂಗಳಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ(CJP Protest) ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್(Nishu Azad) ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಇನ್ಫ್ಲೂಯೆನ್ಸರ್ ಸ್ವತಂತ್ರ ಭಾರದ್ವಾಜ್ನನ್ನು(Swatantra Bharadwaj,) ಶುಕ್ರವಾರ ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು(Delhi Police) ತಿಳಿಸಿದ್ದಾರೆ.
ಸಿಜೆಪಿ ಸಹ-ಸಂಚಾಲಕರಾದ ಸೌರವ್ ದಾಸ್, ಅಶುತೋಷ್ ರಾಂಕಾ, ಸಂಸದರಾದ ಚಂದ್ರಶೇಖರ್ ಆಜಾದ್ ಮತ್ತು ಪಪ್ಪು ಯಾದವ್ ಹಾಗೂ ನೂರಾರು ಬೆಂಬಲಿಗರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಂದು ಒತ್ತಾಯಿಸಿದ್ದರು. ಈ ವೇಳೆ ಭಾರದ್ವಾಜ್ನನ್ನು 72 ಗಂಟೆಗಳ ಒಳಗೆ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಸಿಜೆಪಿ (CJP) ಪ್ರತಿನಿಧಿಗಳು ತಿಳಿಸಿದ್ದರು.
VIDEO | CJP activist Nishu Azad says, “Police officers have assured us that Swatantra will be arrested within 72 hours. They have promised to take action, and we hope there will be no further delay. For days, his supporters have been abusing me, sending rape threats. I have filed… pic.twitter.com/0Tkq0fMEnT
— Press Trust of India (@PTI_News) September 4, 2026
ತನ್ನನ್ನು ತಾನು “ಕಟ್ಟರ್ ಹಿಂದೂ” ಎಂದು ಕರೆದುಕೊಳ್ಳುವ ಭಾರದ್ವಾಜ್, ಸಂದರ್ಶನವೊಂದರಲ್ಲಿ ನಿಶು ಅವರ ತಂದೆ ಸಂಜಯ್ ಕುಮಾರ್ ಅವರ ತಲೆಗೆ ಹೊಡೆದಿದ್ದೇನೆ. ಇಂತಹ ಗಂಭೀರ ಕೃತ್ಯ ಎಸಗಿಯೂ ಜೈಲಿನಿಂದ ತಪ್ಪಿಸಿಕೊಂಡಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದ ವಿಡಿಯೋ ತುಣುಕು ವೈರಲ್ ಆಗಿತ್ತು.
ವೈರಲ್ ವಿಡಿಯೋದಲ್ಲಿ ಭಾರದ್ವಾಜ್, “ನಾನು ನಿಶು ಅವರ ತಂದೆಯ ತಲೆ ಹೊಡೆದಿದ್ದೇನೆ. ಈ ಅಪರಾಧಕ್ಕೆ ಯಾವ ಸೆಕ್ಷನ್ ಅನ್ವಯಿಸುತ್ತದೆ ಗೊತ್ತೇ? ಸೆಕ್ಷನ್ 307. ಅವರಿಗೆ 60 ಹೊಲಿಗೆಗಳು ಬಿದ್ದಿವೆ. ಅವರನ್ನು ಗಂಭೀರ ಸ್ಥಿತಿಯಲ್ಲಿ ಅಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಗಿತ್ತು. ಅವರ ಮಗಳು ಪೊಲೀಸ್ ಠಾಣೆಯ ಹೊರಗೆ ನಿಂತು, ತನ್ನ ತಂದೆಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಳು. ಆದರೂ ನನ್ನನ್ನು ಜೈಲಿಗೆ ಹಾಕಲಿಲ್ಲ. ಇದು ಜಗತ್ತಿಗೆ ತಿಳಿಯಬೇಕು. ನಾನು ರಾತ್ರಿಯಿಡೀ ಆರಾಮವಾಗಿ ಹೊರಗಡೆ ಓಡಾಡಿಕೊಂಡಿದ್ದೆ,” ಎಂದು ಹೇಳಿದ್ದ.
