ಬೆಳಗಾವಿ: ನಗರದ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಪ್ರಕಾಶ್ ನಿಕ್ಕಂ(Prakash Nikam)ಅವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್(Belagavi City Police) ಆಯುಕ್ತರಾಗಿದ್ದ ಭೂಷಣ್ ಬೊರಸೆ(Bhushan Borse) ಅವರನ್ನು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು. ಬೊರಸೆ ಅವರ ಅಧಿಕಾರಾವಧಿಯಲ್ಲಿ ಡ್ರಗ್ಸ್, ಮಟ್ಕಾ ಸೇರಿದಂತೆ ಹಲವು ಅಕ್ರಮ ಮಾಫಿಯಾಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ದಿಢೀರ್ ವರ್ಗಾವಣೆಗೆ ಬೆಳಗಾವಿಯಲ್ಲಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವರ್ಗಾವಣೆ ವಿರೋಧದ ಬೆನ್ನಲ್ಲೇ ಸರ್ಕಾರದ ಮಟ್ಟದಲ್ಲಿ ಆಯುಕ್ತರ ವರ್ಗಾವಣೆಗೆ ಐದು ದಿನಗಳ ಕಾಲ ತಡೆಯಾಜ್ಞೆ ನೀಡಲಾಗಿತ್ತು. ಇದೀಗ ಎಲ್ಲಾ ಬೆಳವಣಿಗೆಗಳ ಬಳಿಕ ಪ್ರಕಾಶ್ ನಿಕ್ಕಂ ಅವರು ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
