ದರ್ಶನ್ ಹಾಗೂ ಧನ್ವೀರ್ ನಡುವಿನ ಸ್ನೇಹ, ಇನ್ನೊಂದೆಡೆ ವಿಜಯಲಕ್ಷ್ಮಿ ಜೊತೆ ಧನ್ವೀರ್ ಅವರ ಶೀತಲ ಸಮರ. ಸದ್ಯಕ್ಕೆ ಈ ವಿಚಾರವೇ ಚರ್ಚೆಯಲ್ಲಿದೆ. ಪರಸ್ಪರ ದೂರು, ಪ್ರತಿದೂರುಗಳು ಕೇಳಿಬರುತ್ತಿವೆ. ಕಳೆದ ಎರಡು ವರ್ಷಗಳಿಂದ, ಅಂದರೆ ದರ್ಶನ್ ಬಂಧನವಾದಾಗಿನಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಬೆಂಬಲವಾಗಿ, ಸಹಾಯಕನಾಗಿ, ಆಪ್ತನಾಗಿ ನಿಂತವರು ಧನ್ವೀರ್. ಆದರೆ, ಇದೇ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರ ಶೀತಲ ಸಮರ ಹಲವರಿಗೆ ನಿಗೂಢವಾಗಿ ಕಾಣುತ್ತಿದೆ.
ಅದು 2024ರ ಜೂನ್ ತಿಂಗಳು. ಕನ್ನಡ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಘಟನೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ. ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ದರ್ಶನ್ ಅವರ ಹೆಸರು ಗಂಭೀರ ಕ್ರಿಮಿನಲ್ ಪ್ರಕರಣವೊಂದರಲ್ಲಿ ಕೇಳಿಬಂದಾಗ, ಅವರ ಅಭಿಮಾನಿಗಳು ಮಾತ್ರವಲ್ಲದೆ ಇಡೀ ಚಿತ್ರರಂಗದ ಗಮನವೂ ಈ ಪ್ರಕರಣದತ್ತ ತಿರುಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ, ಅವರೊಂದಿಗೆ ಗುರುತಿಸಿಕೊಂಡಿದ್ದ ಹಲವರ ಪ್ರತಿಕ್ರಿಯೆಗಳೂ ಸುದ್ದಿಯಾದವು. ಇದೇ ಸಂದರ್ಭದಲ್ಲಿ ನಟ ಧನ್ವೀರ್ ಗೌಡ ಅವರ ನಿಲುವು ಚರ್ಚೆಗೆ ಬಂತು. ದರ್ಶನ್ಗೆ ಬೆಂಬಲವಾಗಿ ನಿಲ್ಲುವುದೇ ಧನ್ವೀರ್ ಅವರ ನಿಲುವಾಯಿತು. ಆಗ ದರ್ಶನ್ ಹಾಗೂ ಅವರ ಕುಟುಂಬದ ಪಾಲಿಗೆ ಧನ್ವೀರ್ ಆಪತ್ಬಾಂಧವನಾಗಿ ಕಂಡುಬಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ದರ್ಶನ್ ಪರವಾಗಿ ನಿಲ್ಲುವ ಮೂಲಕ, ಪ್ರಕರಣದ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಗಳಲ್ಲಿ ಧನ್ವೀರ್ ನೆರವಾಗುತ್ತಾ ಬಂದಿದ್ದರು. ಹೀಗೆ ದರ್ಶನ್ ಬಂಧನದ ಬಳಿಕದ ಕಾನೂನು ಹೋರಾಟದಲ್ಲಿ ವಿಜಯಲಕ್ಷ್ಮಿ ಅವರಿಗೆ ಧನ್ವೀರ್ ಸಹಾಯ ಮಾಡಿದ್ದರು ಎಂಬುದು ಎದ್ದು ಕಾಣುತ್ತಿತ್ತು. ಇಲ್ಲಿ ದರ್ಶನ್ ಅವರ ಬಗ್ಗೆ ಧನ್ವೀರ್ ಹೊಂದಿದ್ದ ಕೃತಜ್ಞತೆಯ ಭಾವವೂ ಸಹಜವಾಗಿಯೇ ಗೋಚರಿಸುತ್ತದೆ. ಹೀಗೆ ಸುಮಾರು ಎರಡು ವರ್ಷಗಳು ಉರುಳಿವೆ. ಇತ್ತ ದರ್ಶನ್ ಕಾನೂನು ಜಟಿಲತೆಗಳಲ್ಲಿ ಸಿಲುಕಿಕೊಂಡಿರುವಾಗಲೇ, ಇದೀಗ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ಬಿರುಕು ಮೂಡಿದೆ ಎಂಬ ವಿಚಾರ ಕೇಳಿಬಂದಿದೆ.
ದರ್ಶನ್ ಆಪ್ತ ಬಳಗದಲ್ಲಿ ಧನ್ವೀರ್ ಗುರುತಿಸಿಕೊಂಡಿದ್ದು ಹೇಗೆ..?
ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುತ್ತಿದ್ದ ದರ್ಶನ್, ಅದೇ ರೀತಿ ಧನ್ವೀರ್ ಎಂಬ ಯುವ ನಟನಿಗೂ ಪ್ರೋತ್ಸಾಹ ನೀಡಿದರು. ಅದು ʻಬಜಾರ್ʼ ಚಿತ್ರದ ಮೂಲಕ. ಧನ್ವೀರ್ ಗೌಡ ಅವರ ಪಾಲಿಗೆ ದರ್ಶನ್ ಕೇವಲ ದೊಡ್ಡ ಸ್ಟಾರ್ ಆಗಿರಲಿಲ್ಲ. ತಮ್ಮ ಸಿನಿಮಾ ಪಯಣದಲ್ಲಿ ಪ್ರೋತ್ಸಾಹ ನೀಡಿದ, ಬೆಂಬಲವಾಗಿ ನಿಂತ ಅಣ್ಣನ ಸ್ಥಾನವನ್ನು ತುಂಬಿದ ವ್ಯಕ್ತಿಯಾಗಿದ್ದರು. ಹೀಗಾಗಿ ʻಬಜಾರ್ʼ ಚಿತ್ರದಿಂದ ಹಿಡಿದು ಇಂದಿನ ʻವಾಮನʼ ಚಿತ್ರದವರೆಗೂ ನಟ ದರ್ಶನ್, ಧನ್ವೀರ್ಗೆ ಜೊತೆಯಾಗಿ ನಿಂತರು.
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಗುರುತಿಸಿಕೊಂಡಿದ್ದ ದರ್ಶನ್ ಎಂದರೆ ಎಷ್ಟೋ ಯುವ ನಟರಿಗೆ ಕನಸು. ಆ ಕನಸಿನ ಬೆನ್ನತ್ತಿ, ತಮ್ಮದೇ ಕನಸಿಗೆ ಹತ್ತಿರವಾದ ಅಭಿಮಾನಿ ನಟನೇ ಧನ್ವೀರ್ ಗೌಡ. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಹೊರಟಿರುವ ಯುವ ನಟ ಧನ್ವೀರ್ಗೆ ದರ್ಶನ್ ಎಂದರೆ ಪಂಚಪ್ರಾಣ. ಸಿನಿಮಾ ಲೋಕಕ್ಕೆ ಬರುವುದಕ್ಕೂ ಮುನ್ನವೇ ದರ್ಶನ್ ಅವರ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿದ್ದ ಧನ್ವೀರ್, ಅವರಿಂದ ಪ್ರೋತ್ಸಾಹವನ್ನೂ ಪಡೆಯುತ್ತಿದ್ದರು. ಇಂದು ಅದೇ ಧನ್ವೀರ್ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೆಸರು.
ತಮ್ಮ ವೃತ್ತಿಜೀವನದ ಬೆಳವಣಿಗೆಯಲ್ಲಿ ದರ್ಶನ್ ನೀಡಿದ ಬೆಂಬಲವನ್ನು ಧನ್ವೀರ್ ಮರೆಯುವುದಿಲ್ಲ. ಅಲ್ಲಿಂದ ಶುರುವಾದ ಇವರಿಬ್ಬರ ಆಪ್ತ ಬಂಧ, ಕಷ್ಟದ ಸಮಯದಲ್ಲೂ ಮುಂದುವರಿದಿದೆ. ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿಯೂ ತೋರಿಸಿಕೊಟ್ಟಿದ್ದಾರೆ.
2019ರಲ್ಲಿ ಧನ್ವೀರ್ ಅಭಿನಯದ ʻಬಜಾರ್ʼ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ದರ್ಶನ್ ನೀಡಿದ ಪ್ರೋತ್ಸಾಹವನ್ನು ಧನ್ವೀರ್ ಸ್ಮರಿಸಿಕೊಂಡಿದ್ದರು. ಸಿನಿಮಾ ಬಿಡುಗಡೆಯ ಹಿಂದಿನ ರಾತ್ರಿ, ಅಪರಿಚಿತ ಸಂಖ್ಯೆಯಿಂದ ದರ್ಶನ್ ಕರೆ ಮಾಡಿದ್ದರು. ಮೊದಲು ಅಭಿಮಾನಿಯಂತೆ ಮಾತನಾಡಿ, ಬಳಿಕ ತಮ್ಮ ಗುರುತನ್ನು ಬಹಿರಂಗಪಡಿಸಿದ್ದರು ಎಂದು ಧನ್ವೀರ್ ಹೇಳಿಕೊಂಡಿದ್ದರು. ಸಿನಿಮಾ ಬಿಡುಗಡೆಯಾಗುತ್ತಿದೆ, ಹೆದರಬೇಡ, ಎಲ್ಲವೂ ಚೆನ್ನಾಗಿರುತ್ತದೆ ಎಂಬ ಧೈರ್ಯದ ಮಾತುಗಳನ್ನು ದರ್ಶನ್ ಹೇಳಿದ್ದರಂತೆ. ಚಿತ್ರಮಂದಿರಗಳಿಗೆ ಭೇಟಿ ನೀಡುವಂತೆಯೂ ಸಲಹೆ ನೀಡಿದ್ದರಂತೆ.
ಒಬ್ಬ ಯುವ ನಟನಿಗೆ ತನ್ನ ಮೊದಲ ಸಿನಿಮಾದ ಬಿಡುಗಡೆಯ ಮುನ್ನ ಆತಂಕ ಎದುರಾಗುವುದು ಸಹಜ. ಅಂತಹ ಸಮಯದಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಹಿರಿಯ ನಟನೊಬ್ಬ ಕರೆ ಮಾಡಿ ಧೈರ್ಯ ತುಂಬಿದರೆ, ಆ ಮಾತುಗಳ ಮೌಲ್ಯವೇ ಬೇರೆ. ಧನ್ವೀರ್ ಅವರ ಪಾಲಿಗೆ ಆ ಕರೆ ಕೇವಲ ಒಂದು ಫೋನ್ ಕಾಲ್ ಆಗಿರಲಿಲ್ಲ; ಅದು ತಮ್ಮ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿದ ಕ್ಷಣವಾಗಿತ್ತು.



