– ಮೊದಲು ದೇಶ ಸೇವೆ ಮಾಡ್ತಿದ್ದೆ, ಈಗ ರಾಮಭಕ್ತರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದ ಸಿಇಒ
ಅಯೋಧ್ಯೆ: ರಾಮಮಂದಿರ (Ram Mandir) ಸಿಇಒ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಜಿತೇಂದ್ರ ಮಿಶ್ರಾ (Jeetendra Mishra) ಅವರು ಅಯೋಧ್ಯೆಗೆ (Ayodhya) ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ.
ಮಾಜಿ ಏರ್ ಮಾರ್ಷಲ್ ಜಿತೇಂದ್ರ ಅವರು ಗುರುವಾರ ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಅಯೋಧ್ಯೆಗೆ ಆಗಮಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ರಾಮ ಮಂದಿರಕ್ಕೆ ತೆರಳಿದರು. ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ರಾಮಲಲ್ಲಾ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಏರ್ ಮಾರ್ಷಲ್, ಹಿಂದಿನದನ್ನು ಬಿಟ್ಟು ಮುಂದುವರಿಯುವ ಸಮಯ ಇದು. ಈ ಮಹಾನ್ ಮತ್ತು ಪವಿತ್ರ ಕಾರ್ಯಕ್ಕಾಗಿ ನನ್ನನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಮತ್ತು ಭಗವಾನ್ ಶ್ರೀರಾಮನಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ. ಮೊದಲು ದೇಶ ಸೇವೆ ಮಾಡುತ್ತಿದ್ದೆ. ಈಗ ರಾಮಭಕ್ತರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಮಿಶ್ರಾ ಅವರ ಜೊತೆಗೆ ಗೋವಿಂದ್ ದೇವಗಿರಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಮೋಹನ್ ಭಾಗ್ಚಂದ್ಕ ಖಜಾಂಚಿ ಹುದ್ದೆಯನ್ನು ವಹಿಸಿಕೊಂಡರು. ರಾಮಮಂದಿರದ ಹೊಸ ಟ್ರಸ್ಟಿಗಳಾದ ಮೋಹನ್ ಪಾಂಡೆ ಮತ್ತು ನಿರ್ಮಲಾ ಯಾದವ್ ಕೂಡ ಅಧಿಕಾರ ಸ್ವೀಕರಿಸಿದರು.
ರಾಮಲಲ್ಲಾಗೆ ಸೇವೆ ಸಲ್ಲಿಸುವ ಅರ್ಚಕರಿಗೆ ಹೊಸ ವಸ್ತ್ರ ಸಂಹಿತೆಯನ್ನು ಸಿದ್ಧಪಡಿಸಲಾಗುತ್ತಿದೆ. ಇದನ್ನು ಜನ್ಮಾಷ್ಟಮಿಯಿಂದ ಜಾರಿಗೆ ತರುವ ನಿರೀಕ್ಷೆಯಿದೆ. 36 ಅರ್ಚಕರಿಗೆ ವಾರಣಾಸಿಯಿಂದ ಎಂಬತ್ತು ಸೆಟ್ ಬಟ್ಟೆಗಳನ್ನು ಆರ್ಡರ್ ಮಾಡಲಾಗಿದ್ದು, ಅದರಲ್ಲಿ 40 ಸೆಟ್ ಬಟ್ಟೆಗಳು ಈಗಾಗಲೇ ಅಯೋಧ್ಯೆಗೆ ತಲುಪಿದೆ.
