ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಏನಾದರೂ ಸ್ಪೆಷಲ್ ಸಿಹಿ ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ಹಾಗಾದ್ರೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪನೀರ್ ಖೀರ್ ಒಳ್ಳೆಯ ಆಯ್ಕೆ. ರಿಚ್ ಹಾಗೂ ಕೆನೆಭರಿತವಾಗಿರುವ ಈ ಪಾಯಸವನ್ನು ಕೇವಲ 25-30 ನಿಮಿಷಗಳಲ್ಲಿ ತಯಾರಿಸಬಹುದು. ಕೃಷ್ಣನಿಗೆ ನೈವೇದ್ಯವಾಗಿಯೂ ಅರ್ಪಿಸಬಹುದು.

ಬೇಕಾಗುವ ಪದಾರ್ಥಗಳು
ಹಾಲು – 1 ಲೀಟರ್
ಪನೀರ್ – 200 ಗ್ರಾಂ
ಸಕ್ಕರೆ – ½ ಕಪ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ಕೇಸರಿ ದಳ – 8-10
ಬಾದಾಮಿ, ಗೋಡಂಬಿ, ಪಿಸ್ತಾ – 2 ಟೇಬಲ್ ಸ್ಪೂನ್
ಕೇಸರಿ ನೆನೆಸಲು ಸ್ವಲ್ಪ ಬಿಸಿ ಹಾಲು

ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ 1 ಲೀಟರ್ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ. ಹಾಲು ಕುದಿಯಲು ಶುರುವಾದ ಬಳಿಕ ಉರಿಯನ್ನು ಕಡಿಮೆ ಮಾಡಿ, ಹಾಲು ಅರ್ಧದಷ್ಟು ಆಗುವವರೆಗೆ ಸುಮಾರು 10-12 ನಿಮಿಷ ಕುದಿಸಿ.
ಈಗ ಕುದಿಸಿದ ಹಾಲಿಗೆ ಸಕ್ಕರೆ ಮತ್ತು ಬಿಸಿ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಕರಗುವವರೆಗೆ 2-3 ನಿಮಿಷ ಕುದಿಸಿ.
ನಂತರ ತುರಿದ ಅಥವಾ ಚಿಕ್ಕದಾಗಿ ಕಟ್ ಮಾಡಿದ ಪನೀರ್ ಅನ್ನು ಹಾಲಿಗೆ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಪನೀರ್ ಹಾಲಿನ ಜೊತೆ ಚೆನ್ನಾಗಿ ಮಿಕ್ಸ್ ಆಗಲು 3-4 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ, ಪಿಸ್ತಾ ಸೇರಿಸಿ ಮಿಕ್ಸ್ ಮಾಡಿ. ಒಂದು ನಿಮಿಷದ ಬಳಿಕ ಗ್ಯಾಸ್ ಆಫ್ ಮಾಡಿ.
ಈಗ ರುಚಿಯಾದ ಪನೀರ್ ಖೀರ್ ರೆಡಿ. ಜನ್ಮಾಷ್ಟಮಿಗೆ ಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಮನೆಯವರ ಜೊತೆ ಸವಿಯಬಹುದು. ಇದನ್ನು ಬಿಸಿಯಾಗಿ ಸವಿಯಬಹುದು ಅಥವಾ ಫ್ರಿಡ್ಜ್ನಲ್ಲಿ ಇಟ್ಟು ನಂತರ ಕೂಡ ಸರ್ವ್ ಮಾಡಬಹುದು.

ರುಚಿ ಹೆಚ್ಚಿಸುವ ಟಿಪ್ಸ್
ಹಾಲು ಕುದಿಸುವಾಗ ಆಗಾಗ ಕೈಯಾಡಿಸಿದರೆ ತಳ ಹಿಡಿಯುವುದನ್ನು ತಪ್ಪಿಸಬಹುದು.
ಪನೀರ್ ಹಾಕಿದ ಬಳಿಕ ಹೆಚ್ಚು ಹೊತ್ತು ಕುದಿಸಬೇಡಿ. ಇಲ್ಲವಾದರೆ ಪನೀರ್ ಗಟ್ಟಿಯಾಗಬಹುದು.
ಸಕ್ಕರೆಯನ್ನು ನಿಮ್ಮ ರುಚಿಗೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
ಖೀರ್ಗೆ ಇನ್ನಷ್ಟು ರಿಚ್ ರುಚಿ ಬೇಕಾದರೆ ಫುಲ್ ಕ್ರೀಮ್ ಹಾಲು ಬಳಸಿ.
ಚಿಲ್ ಮಾಡಿ ಸರ್ವ್ ಮಾಡಿದರೆ ಪನೀರ್ ಖೀರ್ ಇನ್ನಷ್ಟು ಟೇಸ್ಟಿಯಾಗಿರುತ್ತದೆ.
ಮನೆಯಲ್ಲೇ ಸಿಂಪಲ್ ಆಗಿ ತಯಾರಿಸಬಹುದಾದ ಈ ಪನೀರ್ ಖೀರ್ ಅನ್ನು ಈ ಜನ್ಮಾಷ್ಟಮಿಗೆ ಒಮ್ಮೆ ಟ್ರೈ ಮಾಡಿ. ಹಬ್ಬದ ಸಿಹಿಯನ್ನು ಮನೆಯವರೊಂದಿಗೆ ಎಂಜಾಯ್ ಮಾಡಿ.
