ಮಂಡ್ಯ: ಹುಟ್ಟುತ್ತಲೇ ತಾಯಿಯ ಹಾಲಿನಿಂದ (Mandya) ವಂಚಿತವಾಗುವ ನೂರಾರು ಕಂದಮ್ಮಗಳಿಗೆ ಆಸರೆಯಾಗಲು ಸಕ್ಕರೆ ನಾಡು ಮಂಡ್ಯದ ಮಿಮ್ಸ್‌ನಲ್ಲಿ ಎದೆಹಾಲು ಶೇಖರಣಾ ಘಟಕವನ್ನು (Milk Bank) ಸ್ಥಾಪಿಸಲಾಗಿದೆ.
ಜಾಗೃತಿ ಹೆಸರಲ್ಲಿ ಪೋಸ್ಟರ್‌ಗಳಿಗೆ ಪೋಲಾಗುತ್ತಿದ್ದ ಲಕ್ಷಾಂತರ ರೂಪಾಯಿಯಿಂದ, ನವಜಾತ ಶಿಶುಗಳ ಜೀವ ಉಳಿಸಲು ಬಳಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇಡೀ ರಾಜ್ಯಕ್ಕೇ ಮಾದರಿ ಕಾರ್ಯಕ್ಕೆ (Breast Milk Storage Unit) ಅಡಿಪಾಯ ಹಾಕಲು ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್ ನಂದಿನಿ ಮುಂದಾಗಿದ್ದಾರೆ.
ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ತಿಂಗಳಿಗೆ ಬರೋಬ್ಬರಿ 250ಕ್ಕೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತವೆ. ಇದರಲ್ಲಿ ಕನಿಷ್ಠ 50 ರಿಂದ 60 ಕಂದಮ್ಮಗಳಿಗೆ ತಾಯಿಯ ಎದೆಹಾಲು ಸಿಗದೆ ಪರದಾಡಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡ ಸಿಇಓ ಕೆ.ಆರ್ ನಂದಿನಿ ಮಿಮ್ಸ್ ಆಸ್ಪತ್ರೆಯ ವೈದ್ಯರ ಬೆಂಬಲದೊಂದಿಗೆ, ಆಸ್ಪತ್ರೆಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕೊಠಡಿಯನ್ನೇ ಸ್ವಚ್ಛಗೊಳಿಸಿ, 24.50 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಮಿಲ್ಕ್ ಬ್ಯಾಂಕ್ ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ನನ್ನೊಂದಿಗೆ ಹಿಂದೂ ಧರ್ಮದ ಬಗ್ಗೆ ಚರ್ಚೆ ಮಾಡೋಕೆ ಯಾರು ತಯಾರಿದ್ದೀರಿ ಬನ್ನಿ: ರಾಯರೆಡ್ಡಿ ಸವಾಲ್
ಈ ಸತ್ಕಾರ್ಯಕ್ಕೆ ಜಿಲ್ಲೆಯ ಶಾಸಕರೂ 10.50 ಲಕ್ಷ ಅನುದಾನ ನೀಡಿ ಸಾಥ್ ಕೊಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲೇ ಸ್ಥಾಪನೆಯಾಗುತ್ತಿರುವ 5ನೇ ಮಿಲ್ಕ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಮಂಡ್ಯ ಪಾತ್ರವಾಗಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್ ಕೊಠಡಿ ಸಿದ್ಧವಾಗಿದೆ. ಸಿಬ್ಬಂದಿ ತಯಾರಾಗಿದ್ದಾರೆ. ಆದರೆ, ತಾಯಂದಿರ ಎದೆಹಾಲನ್ನು ಸಂರಕ್ಷಿಸಿಡಲು ತಾಂತ್ರಿಕವಾಗಿ ಅತ್ಯಗತ್ಯವಾಗಿರುವ ಮೂರು ಪ್ರಮುಖ ಯಂತ್ರಗಳು ಇನ್ನೂ ಬಂದಿಲ್ಲ. ಪಾಶ್ಚರೈಸರ್, ವರ್ಟಿಕಲ್ ಲ್ಯಾಮಿನಾರ್, ಡೀಪ್ ಫ್ರೀಜರ್ ಯಂತ್ರಗಳನ್ನು ಅಳವಡಿಸಲು 36 ಲಕ್ಷ ಅನುದಾನದ ಅಗತ್ಯವಿದೆ. ಈ ಯಂತ್ರಗಳು ಬಂದರೆ ಸಾಕು, ದಾನಿ ತಾಯಂದಿರಿಂದ ಸಂಗ್ರಹಿಸಿದ ಎದೆಹಾಲನ್ನು ಬರೋಬ್ಬರಿ 6 ತಿಂಗಳ ಕಾಲ ಸಂರಕ್ಷಿಸಿಡಬಹುದಾಗಿದೆ. ಇದನ್ನೂ ಓದಿ: ಗುಟ್ಕಾ ಬ್ಯಾನ್ ಚರ್ಚೆಗೆ ಬಂದಾಗೆಲ್ಲ ಅಡಿಕೆ ಬೆಳೆಗಾರರ ಆತಂಕ – ರೈತರು ಹೇಳೋದೇನು?
