– ಭಾರತದಲ್ಲೇ ಮದುವೆಯಾಗಿ
– ಸ್ವದೇಶಿ ಉತ್ಪನ್ನಗಳನ್ನು ಬಳಸಿ
ನವದೆಹಲಿ: ಅಗತ್ಯ ಇದ್ದರಷ್ಟೇ ಚಿನ್ನ(Gold) ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ. ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತೊಮ್ಮೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮ, ದೆಹಲಿಯ ಜಂತರ್ ಮಂತರ್ ನಲ್ಲಿ ಜೆನ್-ಝೀಗಳ ಪ್ರತಿಭಟನೆ ಸಂದರ್ಭದಲ್ಲಿ ರಾತ್ರಿ ವೇಳೆ ಸರಣಿ ವಿಡಿಯೋ ಮೂಲಕ ಜನರನ್ನುದ್ದೇಶಿಸಿ ಮಾತಾಡಿದ್ದ ಮೋದಿ ಇಂದು ದೇಶದ ಆರ್ಥಿಕತೆ (Economy) ಬಗ್ಗೆ ವಿಡಿಯೋ ಸಂದೇಶ ನೀಡಿದ್ದಾರೆ.
ಭಾರತದ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವುದಕ್ಕೆ ಮೋದಿ ಅವರು ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ʼಆತ್ಮನಿರ್ಭರ ಭಾರತʼ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ನಾಗರಿಕರಿಗೆ ಮತ್ತೊಮ್ಮೆ ಕರೆ ನೀಡಿದ್ದಾರೆ.
ಪ್ರಸ್ತುತ ಕಿರ್ಗಿಸ್ತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್ ವಿಡಿಯೋ ಸಂದೇಶದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. “ದೇಶದ ಜನತೆಗೆ ಅನಂತ ಧನ್ಯವಾದಗಳು. ಶೇ. 7.8ರಷ್ಟು ಜಿಡಿಪಿ ಬೆಳವಣಿಗೆಯು ದೇಶದಲ್ಲಿ ಸಂತಸ ಮೂಡಿಸಿದೆ. ದೇಶವಾಸಿಗಳ ಸಂಕಲ್ಪ ಶಕ್ತಿ ಮತ್ತು ಕಠಿಣ ಪರಿಶ್ರಮಕ್ಕೆ ನನ್ನ ಅಭಿನಂದನೆಗಳು. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ” ಎಂದು ಹೇಳಿದರು. ಇದನ್ನೂ ಓದಿ: ಆರ್‌ಬಿಐ ಅಂದಾಜನ್ನೂ ಮೀರಿಸಿದ ಭಾರತದ ಜಿಡಿಪಿ – ಇರಾನ್ ಯುದ್ಧದ ಮಧ್ಯೆಯೂ ಭರ್ಜರಿ ಬೆಳವಣಿಗೆ!
View this post on Instagram
ಖರೀದಿ ಅಥವಾ ಪ್ರವಾಸದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳು ಮತ್ತು ಸೇವೆಗಳಿಗೆ ಒತ್ತು ನೀಡುವಂತೆ ಪ್ರಧಾನಿ ನಾಗರಿಕರಿಗೆ ಕರೆ ನೀಡಿದರು. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮಗಳಿಂದ ಭಾರತವನ್ನು ರಕ್ಷಿಸಲು ಕೆಲ ತಿಂಗಳುಗಳ ಹಿಂದೆ ಮಾಡಿದ್ದ ಮನವಿಯನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.
ಪ್ರವಾಸೋದ್ಯಮಕ್ಕಾಗಿ ವಿದೇಶಗಳಿಗೆ ಹೋಗಬೇಡಿ. ವಿದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ (ಅದ್ದೂರಿ ಮದುವೆ) ಆಯೋಜಿಸುವುದನ್ನು ತಪ್ಪಿಸಿ. ನಾವೆಲ್ಲರೂ ʻವೆಡ್ ಇನ್ ಇಂಡಿಯಾ (ಭಾರತದಲ್ಲೇ ಮದುವೆಯಾಗಿ) ಮಂತ್ರವನ್ನು ಪಾಲಿಸಬೇಕು. ಅಗತ್ಯವಿಲ್ಲದಿದ್ದರೆ ಮಾತ್ರ ಚಿನ್ನ ಖರೀದಿಸಿ. ನಾವು ಎಷ್ಟರಮಟ್ಟಿಗೆ ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುತ್ತೇವೆಯೋ, ಅಷ್ಟೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದಲಿದೆ. ಸ್ವಾವಲಂಬನೆಗೆ ಇದೇ ರೀತಿ ಒತ್ತು ನೀಡಿದರೆ, ಸ್ವಾತಂತ್ರ್ಯದ 100ನೇ ವರ್ಷಕ್ಕೆ ಕಾಲಿಡುವ ವೇಳೆಗೆ ನಮ್ಮ ಯುವಜನತೆಗೆ ‘ಅಭಿವೃದ್ಧಿ ಹೊಂದಿದ ಭಾರತ’ ಹಸ್ತಾಂತರಿಸಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.
ಭಾರತದ ಬೆಳವಣಿಗೆಯನ್ನು ಸಂಭ್ರಮಿಸುವ ಜೊತೆಗೆ, ವಿಕಸಿತ ಭಾರತ ನಿರ್ಮಾಣಕ್ಕಾಗಿ ಶ್ರಮಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ ಮೋದಿ, “ನಮ್ಮ ಕಠಿಣ ಪರಿಶ್ರಮದ ಮೂಲಕ ಇಂದಿನ ಯುವಜನತೆಯ ಕನಸುಗಳನ್ನು ನನಸು ಮಾಡುತ್ತೇವೆ. ನಮ್ಮ ನೀತಿಗಳು ಸರಿಯಾಗಿವೆ, ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಇಂದು 140 ಕೋಟಿ ದೇಶವಾಸಿಗಳ ಒಗ್ಗಟ್ಟಿನ ಶಕ್ತಿಯು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ” ಎಂದರು. ಇದನ್ನೂ ಓದಿ: ಸೂಪರ್ ಪವರ್ ನಾಯಕನಂತೆ ಬಿಂಬಿಸಲು ಹೋಗಿ ಜಗತ್ತಿನ ಮುಂದೆ ಬೆತ್ತಲಾದ ಪಾಕ್ ಪಿಎಂ!
ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡುವುದು, ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಮತ್ತು ಇವಿ ವಾಹನಗಳನ್ನು ಬಳಸುವುದು, ಕನಿಷ್ಠ ಒಂದು ವರ್ಷ ಅನಗತ್ಯ ವಿದೇಶ ಪ್ರವಾಸ ಹಾಗೂ ಮದುವೆಗಳನ್ನು ತಪ್ಪಿಸುವುದು ಮತ್ತು ವಿದೇಶಿ ವಿನಿಮಯ ಮೀಸಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಅನಗತ್ಯ ಚಿನ್ನ ಖರೀದಿಸದೆ ‘ಮೇಡ್ ಇನ್ ಇಂಡಿಯಾ’ ವಸ್ತುಗಳಿಗೆ ಆದ್ಯತೆ ನೀಡುವಂತೆ ಅವರು ಕೋರಿದ್ದರು.
