– ನರೇಂದ್ರ ಮೋದಿ ಫೋಟೋಗೆ ಕತ್ತರಿ
– ಎಸ್‌ಸಿಒ ಶೃಂಗಸಭೆ ಗ್ರೂಪ್ ಫೋಟೋ ಕ್ರಾಪ್
ಬಿಶ್ಕೆಕ್: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೆ ಮುಖಭಂಗ ಅನುಭವಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಈಗ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತೀವ್ರ ನಗೆಪಾಟಲಿಗೀಡಾಗಿದ್ದಾರೆ.
ಕಿರ್ಗಿಸ್ತಾನದ ಬಿಶ್ಕೆಕ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಅಧಿಕೃತ ಗ್ರೂಪ್ ಫೋಟೋದಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೇ ಕ್ರಾಪ್ ಮಾಡಿ ಕತ್ತರಿಸಿ ಹಾಕುವ ಮೂಲಕ ಪಾಕಿಸ್ತಾನದ ಬಾಲಿಶ ಮನಸ್ಥಿತಿ ಇಡೀ ವಿಶ್ವದ ಎದುರು ಅನಾವರಣಗೊಂಡಿದೆ.
ಮಂಗಳವಾರ ಬಿಶ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ 10 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಒಟ್ಟಾಗಿ ನಿಂತು ಅಧಿಕೃತ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದರು. ಆದರೆ ಪಾಕ್ ಪ್ರಧಾನಿ ಕಾರ್ಯಾಲಯವು (PMO) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಫೋಟೋವನ್ನು ಕಂಡ ನೆಟ್ಟಿಗರು ದಂಗಾಗಿದ್ದಾರೆ.
ಸಾಮಾನ್ಯವಾಗಿ ಇಂತಹ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಆತಿಥೇಯ ದೇಶದ ನಾಯಕರು ಮಧ್ಯಭಾಗದಲ್ಲಿ ನಿಲ್ಲುವುದು ಶಿಷ್ಟಾಚಾರ. ಆದರೆ ಪಾಕ್ ಪ್ರಧಾನಿ ಕಚೇರಿ ಹಂಚಿಕೊಂಡ ಫೋಟೋದಲ್ಲಿ ಇಡೀ ಜಗತ್ತಿಗೆ ತಾನೇ ಮಹಾನಾಯಕ, ತಾನೇ ಈ ಕೂಟದ ಕೇಂದ್ರಬಿಂದು ಎಂಬಂತೆ ಬಿಂಬಿಸಲು ಎಡ-ಬಲದಲ್ಲಿದ್ದ ನಾಯಕರನ್ನೆಲ್ಲಾ ಕತ್ತರಿಸಿ ಶೆಹಬಾಜ್ ಷರೀಫ್‌ರನ್ನು ಸೆಂಟರ್‌ನಲ್ಲಿ ಇರಿಸಲಾಗಿತ್ತು.
ಈ ಕುಚೇಷ್ಟೆ ಮಾಡುವ ಭರದಲ್ಲಿ ಎಡಭಾಗದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷರು ಸೇರಿದಂತೆ ಪ್ರಮುಖ ಗಣ್ಯರನ್ನಷ್ಟೇ ಅಲ್ಲದೆ ಹಿನ್ನೆಲೆಯಲ್ಲಿದ್ದ ಅಧಿಕೃತ ‘ಎಸ್‌ಸಿಒ 2026’ ಲೋಗೋವನ್ನೂ ಕತ್ತರಿಸಿ ಹಾಕಿತ್ತು. ಇದನ್ನೂ ಓದಿ: ಉಕ್ರೇನ್ ವಿರುದ್ಧದ ಯುದ್ಧ ಕೊನೆಗೊಳಿಸಲು ಬೇಕಾದ್ದನ್ನು ಮಾಡಲು ಭಾರತ ಸಿದ್ಧ – ಪುಟಿನ್‌ಗೆ ಮೋದಿ ಸಂದೇಶ
Today, I was honoured to address the SCO Council of Heads of State Meeting in Bishkek as Pakistan assumed the SCO Chairmanship for 2027. I congratulated the Kyrgyz Republic on successfully hosting the Summit and steering the Organization with distinction.
Guided by the Shanghai… pic.twitter.com/1mvRW85klD
— Shehbaz Sharif (@CMShehbaz) September 1, 2026
ಮಾತಿಲ್ಲ, ಕತೆಯಿಲ್ಲ– ಆದರೂ ಬಿಲ್ಡಪ್!
ಶೃಂಗಸಭೆಯ ವೇದಿಕೆಯಲ್ಲಿ ಕೇವಲ ಫೋಟೋ ಕ್ಲಿಕ್ಕಿಸಿಕೊಳ್ಳುವ ಕ್ಷಣಕ್ಕೆ ಮಾತ್ರವೇ ಶೆಹಬಾಜ್ ಷರೀಫ್ ಕಾಣಿಸಿಕೊಂಡಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಥವಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಯಾವುದೇ ಮಹತ್ವದ ಮಾತುಕತೆ ನಡೆಸುವ ಅವಕಾಶವೂ ಅವರಿಗೆ ಸಿಕ್ಕಿರಲಿಲ್ಲ. ಆದರೂ ಜಾಗತಿಕ ಮಟ್ಟದಲ್ಲಿ ತನಗೆ ದೊಡ್ಡ ಮನ್ನಣೆ ಇದೆ ಎಂದು ದೇಶದ ಜನರಿಗೆ ಸುಳ್ಳು ಬಿಂಬಿಸಲು ಹೋಗಿ ಈ ಫೋಟೋ ಅಪ್ಲೋಡ್ ಮಾಡಲಾಗಿದೆ.
ಪಾಕ್ ಪ್ರಧಾನಿ ಫೋಟೋ ಹಂಚಿಕೊಳ್ಳುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ 10 ದೇಶಗಳ ನಾಯಕರಿರುವ ಸಂಪೂರ್ಣ ಅಧಿಕೃತ ಚಿತ್ರವನ್ನು ಹಂಚಿಕೊಂಡಿದ್ದರು. ಮೋದಿ ಹಂಚಿಕೊಂಡ ಅಸಲಿ ಫೋಟೋದಲ್ಲಿ ಶೆಹಬಾಜ್ ಷರೀಫ್ ಬಲಗಡೆಯಿಂದ ನಾಲ್ಕನೆಯವರಾಗಿ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
From the SCO Summit in Bishkek. pic.twitter.com/GDlPpVkSLR
— Narendra Modi (@narendramodi) September 1, 2026
ಮೋದಿಯವರ ಪ್ರಭಾವವನ್ನು ಮರೆಮಾಚಲು ಫೋಟೋ ಕ್ರಾಪ್ ಮಾಡಿದ ಪಾಕಿಸ್ತಾನಿ ಮನಸ್ಥಿತಿ ಎಂತಹ ಕೀಳು ಮಟ್ಟದ್ದು ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಪ್ರಧಾನಿ ಮೋದಿ ಇಡೀ ತಂಡದ ಫೋಟೋ ಹಾಕಿದರೆ ಪಾಕ್ ಪ್ರಧಾನಿ ಕೇವಲ ತಮ್ಮನ್ನು ತೋರಿಸಿಕೊಳ್ಳಲು ಎಡಿಟ್ ಮೊರೆ ಹೋಗಿದ್ದಾರೆ ಎಂದು ಬರೆದು ಅಸಲಿ ಮತ್ತು ನಕಲಿ ಫೋಟೋಗಳನ್ನು ಒಟ್ಟಿಗೆ ಪೋಸ್ಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಸೂಪರ್ ಪವರ್ ನಾಯಕನಂತೆ ಪೋಸ್ ಕೊಡಲು ಹೋದ ಶೆಹಬಾಜ್ ಷರೀಫ್, ಅಗ್ಗದ ಫೋಟೋ ಎಡಿಟಿಂಗ್ ಕಸರತ್ತಿನಿಂದಾಗಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ತಲೆತಗ್ಗಿಸುವಂತೆ ಮಾಡಿದ್ದಾರೆ.
